ಈಗ ಸಾಮಾನ್ಯವಾಗಿ ಎಲ್ಲರೂ ಆನ್ಲೈನ್ ಶಾಪಿಂಗ್ ಮೊರೆಹೋಗ್ತಿದ್ದಾರೆ. ಫೋನ್, ಲ್ಯಾಪ್ಟಾಪ್ನಂತಹ ದುಬಾರಿ ವಸ್ತುಗಳನ್ನು ಕೂಡ ಆನ್ಲೈನ್ನಲ್ಲೇ ಆರ್ಡರ್ ಮಾಡ್ತಾರೆ. ಎಷ್ಟೋ ಬಾರಿ ಗ್ರಾಹಕರಿಗೆ ಮೋಸವಾಗಿರುವ ಘಟನೆಗಳು ಕೂಡ ವರದಿಯಾಗಿವೆ.
ಇದೀಗ ಯಶಸ್ವಿ ಶರ್ಮಾ ಎಂಬ ಗ್ರಾಹಕನೊಬ್ಬ ಫ್ಲಿಪ್ಕಾರ್ಟ್ ತನಗೆ ವಂಚಿಸಿದೆ ಎಂದು ಆರೋಪಿಸಿದ್ದಾನೆ. ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇ ಸೇಲ್ನಲ್ಲಿ ಈತ ಲ್ಯಾಪ್ಟಾಪ್ ಖರೀದಿಸಿದ್ದ. ತಂದೆಗಾಗಿ ಈ ಲ್ಯಾಪ್ಟಾಪ್ ಆರ್ಡರ್ ಮಾಡಿದ್ದೆ ಅಂತಾ ಆತ ಹೇಳಿಕೊಂಡಿದ್ದಾನೆ.
ಯಶಸ್ವಿ ಶರ್ಮಾಗೆ “ಓಪನ್-ಬಾಕ್ಸ್” ಆಪ್ಷನ್ ಬಗ್ಗೆ ತಿಳಿದಿರಲಿಲ್ಲ. ಓಪನ್ ಬಾಕ್ಸ್ ಎಂದರೆ ಲ್ಯಾಪ್ಟಾಪ್ ಪರಿಶೀಲಿಸಿದ ನಂತರವೇ ಡೆಲಿವರಿ ಬಾಯ್ಗೆ ಒಟಿಪಿ ನೀಡಬೇಕಿತ್ತು. ಪ್ರಿಪೇಯ್ಡ್ ಡೆಲಿವರಿಗಳಿಗೆ ಎಂದಿನಂತೆ ಪ್ಯಾಕೇಜ್ ಸ್ವೀಕರಿಸಿದ ನಂತರ ಯಶಸ್ವಿ OTP ಹೇಳಿದ್ದಾರೆ.
ನಂತರ ಅದನ್ನು ಅನ್ಬಾಕ್ಸ್ ಮಾಡಿದ ಯಶಸ್ವಿಗೆ ಆಘಾತ ಕಾದಿತ್ತು. ಡಬ್ಬದಲ್ಲಿ ಲ್ಯಾಪ್ಟಾಪ್ ಬದಲು ಘಡಿ ಡಿಟರ್ಜೆಂಟ್ ಸೋಪ್ ಇಟ್ಟು ಕೊಡಲಾಗಿದೆ. ಈ ಬಗ್ಗೆ ಫ್ಲಿಪ್ಕಾರ್ಟ್ಗೆ ಯಶಸ್ವಿ ದೂರು ಕೊಟ್ಟಿದ್ದಾರೆ. ಆದ್ರೆ ಬಾಕ್ಸ್ ಓಪನ್ ಮಾಡದೇ ಓಟಿಪಿ ನೀಡಿದ್ದು ನಿಮ್ಮದೇ ತಪ್ಪು, ಹಾಗಾಗಿ ಅದಕ್ಕೇನೂ ಪರಿಹಾರವಿಲ್ಲ ಎಂದು ಫ್ಲಿಪ್ಕಾರ್ಟ್ ಕಸ್ಟಮರ್ ಕೇರ್ ಸಿಬ್ಬಂದಿ ಹೇಳ್ತಿದ್ದಾರೆ. ಸಾವಿರಾರು ರೂಪಾಯಿ ಕೊಟ್ಟು ಲ್ಯಾಪ್ಟಾಪ್ ಆರ್ಡರ್ ಮಾಡಿದ್ದ ಯಶಸ್ವಿ ಈಗ ಕಂಗಾಲಾಗಿದ್ದಾರೆ. ತಮಗಾದ ಮೋಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬರೆದುಕೊಂಡಿದ್ದಾರೆ.