ಸುದೀರ್ಘ ಕಾಯುವಿಕೆಯ ನಂತರ ಮಹೀಂದ್ರಾ ಕಂಪನಿ ಕೊನೆಗೂ ನವರಾತ್ರಿಯ ಮೊದಲ ದಿನ ‘ಬಿಗ್ ಡ್ಯಾಡಿ ಆಫ್ ಎಸ್ಯುವಿ’ ಎನಿಸಿಕೊಂಡಿರೋ ಮಹೀಂದ್ರ ಸ್ಕಾರ್ಪಿಯೋ-ಎನ್ ಕಾರಿನ ವಿತರಣೆಯನ್ನು ಪ್ರಾರಂಭಿಸಿದೆ. ಮೊದಲ ದಿನವೇ ಕುಸ್ತಿಪಟು ಗೀತಾ ಫೋಗಟ್ ಮಹೀಂದ್ರಾ ಸ್ಕಾರ್ಪಿಯೋ-ಎನ್ ಅನ್ನು ಖರೀದಿಸಿದ್ದಾರೆ.
ಈ ಕಾರನ್ನು ಕೊಂಡುಕೊಂಡ ಮೊದಲ ಗ್ರಾಹಕಿ ಎನಿಸಿಕೊಂಡಿದ್ದಾರೆ ಗೀತಾ ಫೋಗಟ್. ಅದ್ಭುತವಾದ ‘ವಿಸ್ಮಯಕಾರಿ ಕಾರು’ ತಯಾರಿಸಿದ್ದಕ್ಕಾಗಿ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಗೀತಾ ಧನ್ಯವಾದ ಹೇಳಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರ ಕೂಡ ಪ್ರತಿಕ್ರಿಯಿಸಿದ್ದಾರೆ.
“ಇದೊಂದು ಬೋನಸ್. ಗೀತಾ, ಸ್ಕಾರ್ಪಿಯೋ-ಎನ್ ಕಾರಿನ ನಮ್ಮ ಮೊದಲ ಗ್ರಾಹಕರಲ್ಲಿ ಒಬ್ಬರಾಗಿದ್ದು ನಮ್ಮ ಸೌಭಾಗ್ಯ. ನಾವು ನಿಮ್ಮ ಚಿನ್ನದ ಪದಕದ ವೈಭವದಲ್ಲಿ ಮುಳುಗಿದ್ದೇವೆ ! ನಮ್ಮ ಕಾರು ನಿಮ್ಮಂತೆಯೇ ಕಠಿಣವಾಗಿದೆ ಎಂದು ನಾವು ಭಾವಿಸುತ್ತೇವೆ ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನವರಾತ್ರಿಯಲ್ಲಿ 7,000 ಯೂನಿಟ್ಗಳನ್ನು ಗ್ರಾಹಕರಿಗೆ ತಲುಪಿಸಲು ಮಹೀಂದ್ರ ಕಂಪನಿ ಮುಂದಾಗಿದೆ.
ಆರಂಭದಲ್ಲಿ 25,000 ಯುನಿಟ್ಗಳಿಗೆ ಕೇವಲ 11.99 ಲಕ್ಷ ರೂಪಾಯಿಗಳ ಉದ್ಘಾಟನಾ ಬೆಲೆಯೊಂದಿಗೆ ಬುಕಿಂಗ್ ತೆರೆಯಲಾಗಿತ್ತು. ವಿಶೇಷ ಅಂದ್ರೆ ಒಂದೇ ದಿನದಲ್ಲಿ ಎಲ್ಲಾ 25,000 ಎಸ್ಯುವಿಗಳು ಬುಕ್ ಆಗಿದ್ದವು. ಇನ್ನು 2 ವರ್ಷಗಳ ಅವಧಿಗೆ ಮಹೀಂದ್ರಾ ಸ್ಕಾರ್ಪಿಯೋ ಎನ್ ಬುಕ್ಕಿಂಗ್ ಆಗಿದೆಯಂತೆ. ಮೊದಲು ಬುಕ್ಕಿಂಗ್ ಆದ 25,000 ಎಸ್ಯುವಿ ಯಾವಾಗ ಲಭ್ಯವಾಗಲಿದೆ ಎಂಬುದರ ಅಂದಾಜು ಅವಧಿಯನ್ನು ಇನ್ನು 10 ದಿನಗಳಲ್ಲಿ ಗ್ರಾಹಕರಿಗೆ ತಿಳಿಸಲಾಗುತ್ತದೆ.
ಜುಲೈ 30 ರಂದು 30 ನಿಮಿಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಎಸ್ಯುವಿಗಳು ಬುಕ್ಕಿಂಗ್ ಆಗಿದ್ದು ವಿಶೇಷ. ಮಹೀಂದ್ರಾ ಸ್ಕಾರ್ಪಿಯೊ-ಎನ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 2.0L mStallion ಟರ್ಬೊ-ಪೆಟ್ರೋಲ್ ಮೋಟಾರ್ ಮತ್ತು 2.2L mHawk ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್. SUV ಅನ್ನು 6-ಸ್ಪೀಡ್ MT ಅಥವಾ 6-ಸ್ಪೀಡ್ AT ಜೊತೆ ಪಡೆಯಬಹುದು.