ಚಂಡೀಗಢ ವಿಶ್ವವಿದ್ಯಾನಿಲಯದ ಎಂಎಂಎಸ್ ಹಗರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶದಿಂದ ಬಂಧಿತನಾಗಿರುವ ಸೇನಾ ಸಿಬ್ಬಂದಿ ಸಂಜೀವ್ ಸಿಂಗ್ ಹಾಸ್ಟೆಲ್ ನಲ್ಲಿ ಮಹಿಳೆಯರ ಸ್ನಾನದ ವಿಡಿಯೋ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆರೋಪಿತೆ ಜೊತೆಗಿನ ಸಂಬಂಧದ ಬಗ್ಗೆ ಮೊಹಾಲಿ ಪೊಲೀಸರಿಗೆ ಸಂಜೀವ್ ಸಿಂಗ್ ತಿಳಿಸಿದ್ದಾರೆ.
ಸೇನಾ ಸಿಬ್ಬಂದಿ ಮತ್ತು ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತರಾಗಿ ತಮ್ಮ ಮೊಬೈಲ್ ಫೋನ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡಿದ್ದಾರೆಂಬ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸಂಜೀವ್ ಅವರ ಎರಡು ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿದ್ದಾರೆ.
ಎಂಬಿಎ ವಿದ್ಯಾರ್ಥಿನಿಯಾಗಿರುವ ಆರೋಪಿಯನ್ನು ಹಾಸ್ಟೆಲ್ ಮ್ಯಾನೇಜರ್ ವಿಚಾರಣೆ ನಡೆಸಿದಾಗ ಆಕೆಗೆ ಯಾರೋ ನಿರಂತರವಾಗಿ ಸಂದೇಶ ಕಳುಹಿಸುತ್ತಿರುವುದು ಪತ್ತೆಯಾಗಿತ್ತು. ನಂತರ, ವಾಟ್ಸಾಪ್ ಚಾಟ್ ನಲ್ಲಿ ಅವಳು ಸಂಜೀವ್ ಸಿಂಗ್ ಅವರೊಂದಿಗೆ ಚಾಟ್ ಮಾಡುತ್ತಿದ್ದಳು ಎಂದು ಬಹಿರಂಗವಾಗಿದ್ದು, ವಿಡಿಯೋಗಳು ಮತ್ತು ಫೋಟೋಗಳನ್ನು ಕಳುಹಿಸುವಂತೆ ಆತ ಕೇಳುತ್ತಿದ್ದ. ವಿಡಿಯೋಗಳನ್ನು ಚಿತ್ರೀಕರಿಸುವಂತೆ ವಿದ್ಯಾರ್ಥಿನಿಗೆ ಒತ್ತಡವಿತ್ತು ಎಂಬುದು ಚಾಟ್ ನಲ್ಲಿ ಬಹಿರಂಗವಾಗಿದೆ.
ಫೋಟೋ ಕ್ಲಿಕ್ಕಿಸಿ ಸಿಕ್ಕಿಬಿದ್ದಾಗಿನಿಂದ ಫೋಟೋಗಳು ಮತ್ತು ವಿಡಿಯೊಗಳನ್ನು ಕೇಳುವ ಮೂಲಕ ಸಂಜೀವ್ ತನ್ನನ್ನು ಮುಜುಗರದ ಪರಿಸ್ಥಿತಿಗೆ ತಂದಿದ್ದಾನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಆಕೆ ತನ್ನ ಫೋನ್ ಸಂಪರ್ಕದಲ್ಲಿ, ಸಂಜೀವ್ ಸಿಂಗ್ ಸಂಖ್ಯೆ ಸೇವ್ ಮಾಡಿ ಅದಕ್ಕೆ ರಂಕಜ್ ವರ್ಮಾ ಅವರ ಫೋಟೋ ಬಳಸಿದ್ದಾಳೆ.