ಶಿವಮೊಗ್ಗ: ಗಿಡ ನೆಟ್ಟರೆ ಮಳೆ ಬರುತ್ತದೆ. ಪರಿಸರ ಉಳಿಸಿದರೆ ಮಾತ್ರ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಹಾಗೂ ಪರಿಸರ ಪ್ರೇಮಿ ಶ್ರೀಮತಿ ತುಳಸಿಗೌಡ ಹೇಳಿದ್ದಾರೆ.
ಅವರು ಇಂದು ನಗರದ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾನು ಓದಿಲ್ಲ, ಭಾಷಣಕಾರಳೂ ಅಲ್ಲ. ನನಗೆ ದೇವಿ ವಿಗ್ರಹ ನೋಡಿ ತುಂಬಾ ಸಂತೋಷವಾಗಿದೆ. ಆ ಚಾಮುಂಡೇಶ್ವರಿ ನಾಡಿನ ಜನತೆಗೆ ಸಕಲ ಸೌಭಾಗ್ಯ ಕೊಡಲಿ ಎಂದು ಹಾರೈಸಿದರು.
ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಸಂಭ್ರಮದ ದಸರಾ ಆಗಿದೆ. ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಸ್ವಚ್ಛ ಶಿವಮೊಗ್ಗ ಎಂಬ ಪ್ರಶಸ್ತಿ ರಾಷ್ಟ್ರಪತಿಗಳ ಮುಖಾಂತರ ದೇಶದಲ್ಲೇ ಮೊದಲನೇ ಸ್ಥಾನಕ್ಕೆ ಪಾಲಿಕೆಗೆ ಕೊಡುತ್ತಿರುವುದು ದಸರಾದ ಮೆರಗಿಗೆ ಇನ್ನೊಂದು ಗರಿ ಸೇರಿದಂತಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.
ಅಸುರೀ ಶಕ್ತಿಗಳ ನಾಶಕ್ಕಾಗಿ ಭಾರತೀಯರಿಗೆ ಎಲ್ಲದರಲ್ಲೂ ವಿಜಯ ಸಿಗಲಿ ಎಂದು ನವರಾತ್ರಿಯಲ್ಲಿ ನವದುರ್ಗೆ ಪೂಜಿಸಿ ವಿಜದಶಮಿ ಆಚರಿಸುತ್ತೇವೆ. ಹಿಂದಿನಿಂದಲೂ ದೇಶದಲ್ಲಿ ಪರಕೀಯ ಶಕ್ತಿಗಳು ತೊಂದರೆ ಕೊಡುತ್ತಾ ಬಂದಿವೆ. ಆಗ ಎಲ್ಲಾ ಸಂದರ್ಭಗಳಲ್ಲೂ ನಮ್ಮ ದೇಶ ಭಕ್ತ ಭಾರತೀಯರು ಅವರನ್ನು ಎದುರಿಸಿ ಗೆದ್ದಿದ್ದಾರೆ. ಈಗ ಮತ್ತೆ ದೇಶ ವಿದ್ರೋಹಿಗಳು ಅಲ್ಲಲ್ಲಿ ದೇಶದ್ರೋಹ ಚಟುವಟಿಕೆ ನಡೆಸುತ್ತಿದ್ದಾರೆ. ರಾಷ್ಟ್ರದ್ರೋಹಿ ಶಕ್ತಿಗಳ ಆಟ ಇನ್ನುಮುಂದೆ ನಡೆಯುವುದಿಲ್ಲ. ನಾವೆಲ್ಲಾ ಚಾಮುಂಡೇಶ್ವರಿ ಮುಂದೆ ದೇಶ ರಕ್ಷಣೆಯ ಶಪಥ ಮಾಡಬೇಕಾಗಿದೆ ಎಂದರು.
ಮುಸ್ಲಿಂ ರಾಷ್ಟ್ರಗಳಲ್ಲೇ ಆಂತರಿಕ್ಷ ಕ್ಷೋಭೆ ಕಚ್ಚಾಟ ನಡೆದಿದೆ. ಆದರೆ, ಭಾರತ ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರನ್ನು ಇಟ್ಟುಕೊಂಡು ಶಾಂತಿ, ನೆಮ್ಮದಿಯಿಂದ ಇದೆ. ಕೆಲವು ಮುಸಲ್ಮಾನ್ ಗೂಂಡಾಗಳು ಈ ದೇಶವನ್ನು ಹಾಳು ಮಾಡಲು ಅನೇಕ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವ ತಾಯಿ ಚಾಮುಂಡೇಶ್ವರಿ ನಮಗೆ ಆಶೀರ್ವಾದ ಮಾಡಲಿದ್ದಾಳೆ. ಈ ದೇಶ ಶಾಂತಿಯ ದೇಶ, ಆದರೆ, ನಮ್ಮ ಸುದ್ದಿಗೆ ಬಂದರೆ ಬಿಡುವುದಿಲ್ಲ. ದೇಶ ದ್ರೋಹಿಗಳು ಸರ್ವನಾಶವಾಗುತ್ತಾರೆ ಎಂದರು.
ಇದಕ್ಕೂ ಮುನ್ನ ಬೆಳ್ಳಿ ಅಂಬಾರಿಯಲ್ಲಿ ನೂತನವಾಗಿ ನಿರ್ಮಿಸಿದ ಬಂಗಾರದ ಕಿರೀಟ ಹೊತ್ತ ದೇವಿ ಚಾಮುಂಡೇಶ್ವರಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದವರೆಗೆ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳೊಂದಿಗೆ ತರಲಾಯಿತು.