ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್‌ಮನ್ ಒಬ್ಬ ಎಲೆಮರೆಕಾಯಿಯಂತೆ ಕ್ರಿಕೆಟ್‌ನಲ್ಲಿ ಸಾಧನೆಯ ಶಿಖರವೇರುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತದ ಸರಣಿ ಗೆಲುವಿನ ಹಿಂದೆ ಗಮನ ಸೆಳೆದಿದ್ದು ಈ ಸ್ಟಾರ್ ಆಟಗಾರನ ಬ್ಯಾಟಿಂಗ್. ಆಸ್ಟ್ರೇಲಿಯ ವಿರುದ್ಧದ ಬಿರುಸಿನ ಇನ್ನಿಂಗ್ಸ್ ಬೆನ್ನಲ್ಲೇ ದೊಡ್ಡ ದಾಖಲೆಯನ್ನೂ ಮಾಡಿದ್ದಾರೆ ಕ್ರಿಕೆಟರ್.
ಅವರೇ ಸೂರ್ಯಕುಮಾರ್ ಯಾದವ್ ಎಂಬ ಸ್ಫೋಟಕ ಬ್ಯಾಟ್ಸ್‌ಮನ್. ವಿರಾಟ್ ಕೊಹ್ಲಿ ಜೊತೆಗೂಡಿ ಸೂರ್ಯಕುಮಾರ್, ಟೀಂ ಇಂಡಿಯಾಕ್ಕೆ ಗೆಲುವನ್ನು ತಂದುಕೊಟ್ಟರು. 36 ಎಸೆತಗಳಲ್ಲಿ 5 ಬೌಂಡರಿ ಹಾಗೂ ಸಿಕ್ಸರ್ ಒಳಗೊಂಡ 69 ರನ್ ಗಳಿಸಿ ತಮ್ಮ ಶ್ರೇಷ್ಠ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ ಸೂರ್ಯಕುಮಾರ್. ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಬಿರುಸಿನ ಇನ್ನಿಂಗ್ಸ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಈ ವರ್ಷ ಆಡಿದ 20 ಪಂದ್ಯಗಳ 20 ಇನ್ನಿಂಗ್ಸ್‌ಗಳಲ್ಲಿ 37.88 ಸರಾಸರಿಯಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಒಳಗೊಂಡಂತೆ 682 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಇವರ ಹತ್ತಿರಕ್ಕೂ ಸುಳಿದಿಲ್ಲ. ಸೂರ್ಯಕುಮಾರ್ ಯಾದವ್ 2022ರಲ್ಲಿ ಆಡಿದ ಟಿ-20 ಪಂದ್ಯಗಳಲ್ಲಿ ಒಟ್ಟು 42 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 2022ರ ಟಿ 20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಶಕ್ತಿಯಾಗಬಹುದು ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇದೆ.
ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿದ್ದು, ಭರವಸೆ ಮೂಡಿಸಿದ್ದಾರೆ. ಎಲ್ಲಾ ದಿಕ್ಕಿನಲ್ಲೂ ಸ್ಟ್ರೋಕ್ ಬಾರಿಸಬಲ್ಲ ಚತುರತೆ ಅವರಲ್ಲಿದೆ. ದೊಡ್ಡ ಹೊಡೆತಗಳಿಗೂ ಹಿಂದೇಟು ಹಾಕದ ಬಿರುಸಿನ ಬ್ಯಾಟ್ಸ್‌ಮನ್ ಅವರು. ಹಾಗಾಗಿ ಉತ್ತಮ ಫಾರ್ಮ್ ಮುಂದುವರಿಸಿದ್ರೆ ಎದುರಾಳಿಗಳನ್ನು ಬಗ್ಗುಬಡಿಯುವುದು ಟೀಂ ಇಂಡಿಯಾಕ್ಕೆ ಸುಲಭವಾಗಲಿದೆ.