ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿಯಲ್ಲಿ ಒಂದು ಸಾವಿರ ಸಾಮರ್ಥ್ಯದ ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಉದ್ಯಾನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ವಿದ್ಯಾರ್ಥಿಗಳಿಗೆ ಸ್ಪೂರ್ತಿ ಸಿಗಲಿ ಎಂಬ ಕಾರಣಕ್ಕೆ ಐದು ವಿದ್ಯಾರ್ಥಿ ನಿಲಯಗಳಿಗೆ ದೀನ್ ದಯಾಳ್ ಉಪಾಧ್ಯಾಯರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಎಸ್ ಸಿ / ಎಸ್ ಟಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದ ಅವರು, 50 ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ಕನಕದಾಸರ ಹೆಸರಿನಲ್ಲಿ ನಿರ್ಮಿಸುತ್ತೇವೆ ಎಂದು ಮಾಹಿತಿ ನೀಡಿದರು.