ಹೆಣ್ಣು ಸಂಸಾರದ ಕಣ್ಣು ಅನ್ನೊ ಮಾತಿದೆ. ಅದು ನಿಜ ಕೂಡಾ ಹೌದು. ಕಷ್ಟ ಸುಖ ಏನೇ ಬರಲಿ ತನ್ನ ಕುಟುಂಬಕ್ಕೆ ಏನೇನೂ ಸಮಸ್ಯೆಯೇ ಆಗದಿರುವಂತೆ ರಕ್ಷಣೆ ಕೊಡುವುದರಲ್ಲಿ ಆಕೆ ಸದಾ ಮುಂದು. ಅದಕ್ಕಾಗಿ ಆಕೆ ಧೃಡ ಸಂಕಲ್ಪ ಹೊತ್ತು ಎಂತಹದ್ದೇ ಸವಾಲಿನ ಕೆಲಸ ಆದರೂ ಅಷ್ಟೆ ಸುಲಭವಾಗಿ ಮಾಡಿ ತೋರಿಸುತ್ತಾಳೆ. ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ನೋಯ್ಡಾದ ಚಂಚಲ್ ಶರ್ಮಾ.
ಮೂರು ವರ್ಷದ ಹಿಂದೆ ಚಂಚಲ್ ಶರ್ಮಾ ಅವರಿಗೆ ಮದುವೆಯಾಗಿತ್ತು. ಈಗ ಅವರಿಗೆ ಒಂದು ಪುಟ್ಟ ಮಗು ಕೂಡಾ ಇದೆ. ಮದುವೆಯಾದ ಒಂದೇ ಒಂದು ವರ್ಷದಲ್ಲಿ ಚಂಚಲಾ ಶರ್ಮಾ ಅವರಿಗೆ ಗಂಡ ನಿತ್ಯ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಮಗುವಾದ ಮೇಲೂ ಗಂಡ ಕಿರುಕುಳ ಕೊಡುವುದನ್ನ ನಿಲ್ಲಿಸಿರಲಿಲ್ಲ, ಕೊನೆಗೆ ತಾಳ್ಮೆಗೆಟ್ಟ ಚಂಚಲ್ ಶರ್ಮಾ ಗಂಡನಿಂದ ವಿಚ್ಛೇದನ ಪಡೆಯುವುದಕ್ಕೆ ಮುಂದಾಗಿದ್ದರೆ. ಸದ್ಯಕ್ಕೆ ಪ್ರಕರಣ ಕೋರ್ಟ್ನಲ್ಲಿದೆ.
ಅಸಲಿಗೆ ಸಮಸ್ಯೆ ಆರಂಭವಾಗಿದ್ದೇ ಆ ಸಮಯದಿಂದ, ಗಂಡನಿಂದ ದೂರವಾದ ಮೇಲೆ ಚಂಚಲ್ ಶರ್ಮ ಅವರಿಗೆ ಮಗು ಸಾಕುವುದಕ್ಕೆ, ಒಂದು ಹೊತ್ತಿನ ಊಟ ತಿಂಡಿಗೂ ಪರದಾಡಬೇಕಾಯ್ತು. ಅದಕ್ಕಾಗಿ ಇವರು ಆಟೋ ರಿಕ್ಷಾ ಓಡಿಸುವುದಕ್ಕೆ ಮುಂದಾದರು. ಈಗ ಅವರು ಪ್ರತಿನಿತ್ಯ ಆಟೋ ಓಡಿಸುತ್ತಾರೆ. ಅದು ಕೂಡಾ ತಮ್ಮ ಜೊತೆ ಮಗುವನ್ನ ಇಟ್ಟುಕೊಂಡೇ ಆಟೋ ಓಡಿಸುತ್ತಾರೆ. ಈಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೊದಲಿಗೆ ಓರ್ವ ಮಹಿಳೆ ರಿಕ್ಷಾ ಓಡಿಸುವುದನ್ನ ನೋಡಿ ಜನರು ಅಚ್ಚರಿ ವ್ಯಕ್ತಪಡಿಸಿದ್ದರು. ಉಳಿದ ಆಟೋ ಚಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಆ ಸವಾಲನ್ನ ಸ್ವೀಕರಿಸಿ ಆಟೋ ಓಡಿಸುತ್ತಿದ್ದಾರೆ. ಚಂಚಲ್ ಶರ್ಮಾ ಈಗ ಪ್ರತಿನಿತ್ಯ 300-400 ರೂಪಾಯಿ ಸಂಪಾದಿಸುತ್ತಿದ್ದಾರೆ.
ಗಂಡ ಬಿಟ್ಟು ಹೋದ ನಂತರ ಗೌರವಯುತವಾಗಿ ಸಂಪಾದನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದೇನೆ. ಹಣಕ್ಕಾಗಿ ಗಂಡನ ಮುಂದೆ ಕೈ ಒಡ್ಡಬಾರದು ಅನ್ನೊದಕ್ಕೆ ಆಟೋ ಓಡಿಸುತ್ತಿದ್ಧೇನೆ ಎಂದು ಚಂಚಲ್ ಶರ್ಮಾ ಹೇಳಿದ್ದಾರೆ. ಗಂಡ ಇಲ್ಲ, ಮುಂದೆ ಭವಿಷ್ಯ ಹೇಗೋ ಏನೋ ಅಂತ ಚಿಂತೆ ಮಾಡುವವರಿಗೆ ಚಂಚಲ್ ಶರ್ಮಾ ಮಾದರಿಯಾಗಿದ್ದಾರೆ.