ಬೆಂಗಳೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಆರಂಭ, ಸ್ಫೂರ್ತಿ ನೀಡಿದ ನಾಯಕನ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ನಾನು ರಾಜಕೀಯಕ್ಕೆ ಬರಲು ಸ್ಫೂರ್ತಿ ಕೇಂದ್ರದ ಮಾಜಿ ಸಚಿವ ದಿ.ಜಾರ್ಜ್ ಫರ್ನಾಂಡಿಸ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಜಾರ್ಜ್ ಫರ್ನಾಂಡಿಸ್ ಜೀವನ ಚರಿತ್ರೆ ಕುರಿತ ‘ದಿ ಲೈಫ್ ಆಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡಿಸ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ತಮ್ಮ ಹಳೇ ನೆನಪುಗಳನ್ನು ಬಿಚ್ಚಿಟ್ಟರು.
ಜೆಡಿಯು ಪಕ್ಷ ಸ್ಥಾಪನೆಯಾದಾಗ ನಾನು ಜಾರ್ಜ್ ಫರ್ನಾಂಡಿಸ್ ಜೊತೆ ಹೋಗಲಿಲ್ಲ. ಕಾರಣ ಜೆಡಿಯು ಬಿಜೆಪಿಗೆ ಬೆಂಬಲ ನೀಡುತ್ತೆ ಹಾಗಾಗಿ ನಾನು ಬರಲ್ಲ ಎಂದು ಹೇಳಿದ್ದೆ. 1999ರಲ್ಲಿ ಜನತಾದಳ ಇಬ್ಭಾಗವಾದಾಗ ನಾವು ತುಂಬಾ ಹತ್ತಿರವಾದೆವು. ಏರ್ ಪೋರ್ಟ್ ನಿಂದ ಕರೆತರುವುದು ಬಿಡುವುದು ಮಾಡುತ್ತಿದ್ದೆ. ಫರ್ನಾಂಡಿಸ್ ಒಬ್ಬ ಮಾನವತಾವಾದಿ. ತುರ್ತು ಪರಿಸ್ಥಿತಿ ವೇಳೆ ಜಾರ್ಜ್ ಫರ್ನಾಂಡಿಸ್ ರನ್ನು ಬಂಧಿಸಿದ್ದರು. ಮಾನವ ಹಕ್ಕುಗಳ ರಕ್ಷಣೆಗಾಗಿ ಅವರು ಜೀವನ ಪರ್ಯಂತ ಹೋರಾಡಿದ್ದಾರೆ. 1989ರಲ್ಲಿ ಲೋಕಸಭೆಗೆ ಸ್ಪರ್ಧಿಸಲು ನನಗೆ 1 ಲಕ್ಷ ರೂಪಾಯಿ ಕೊಟ್ಟರು.
ನನ್ನ ಬಳಿ ಹಣವಿರಲಿಲ್ಲ. ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಸೋತೆ. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಪರ ಪ್ರಚಾರ ಮಾಡಿದ್ದರು. ನಾನು ರಾಜಕೀಯವಾಗಿ ಬೆಳೆಯಲು ಅವರೇ ಕಾರಣ. ಲೋಕದಳ ರಾಜ್ಯದಲ್ಲಿ ಇರಲೇ ಇಲ್ಲ. ಆದರೆ ನಾನು ಜಾರ್ಜ್ ಗಾಗಿಯೇ ಲೋಕದಳಕ್ಕೆ ಹೋದೆ. 8-10 ಭಾಷೆಗಳಲ್ಲಿ ಅವರು ಮಾತನಾಡುತ್ತಿದ್ದರು. ದೊಡ್ಡ ವಾಗ್ಮಿ. ಆದರೆ ಕೊನೆಯಲ್ಲಿ ಮಾತನ್ನು ಕಳೆದುಕೊಂಡುಬಿಟ್ಟರು.
ಕರ್ನಾಟಕದಿಂದ ಹೋಗಿ ಉತ್ತರ ಭಾರತ, ಇಡೀ ದೇಶದಲ್ಲಿ ರಾಜಕಾರಣ ಮಾಡಿ ಜನಪ್ರಿಯತೆ ಪಡೆದರು. ಹಿಂದೆ ಜಾರ್ಜ್ ಫರ್ನಾಂಡಿಸ್ ಕೋಕಾಕೋಲಾ ಸೇವಿಸಬಾರದು ಎಂದು ಕಂಪನಿ ವಿರುದ್ಧ ಕರೆ ಕೊಟ್ಟಿದ್ದರು. ಅಂದಿನಿಂದ ಇಂದಿನವರೆಗೂ ನಾನು ಕೋಕಾಕೋಲಾ ಕುಡಿದಿಲ್ಲ, ಮುಂದೆ ಕುಡಿಯುವುದೂ ಇಲ್ಲ ಎಂದು ಹೇಳಿದರು.