ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿದ್ದು, ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಕಂಟ್ರೋಲ್ ರೂಮ್ ನ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಸರಿಪಡಿಸಿದ ಬಳಿಕ ಆಂಬುಲೆನ್ಸ್ ಸೇವೆ ಮರು ಸ್ಥಾಪಿಸಲಾಗುವುದು. ದಿಢೀರ್ ಆಗಿ ತಾಂತ್ರಿಕ ಸಮಸ್ಯೆಯಾಗಿದ್ದರಿಂದ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಸಾಫ್ಟ್ ವೇರ್ ನ ಮದರ್ ಬೋರ್ಡ್ ಹಾಳಾಗಿದ್ದು, ಅದರ ಬಿಡಿಭಾಗ ಎಲ್ಲಿಯೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
2008 ರಲ್ಲಿ ರೂಪುಗೊಂಡ ಸಾಫ್ಟ್ ವೇರ್ ಇದಾಗಿದೆ. ಸರ್ವಿಸ್ ನಲ್ಲಿ ಬಳಸಿದ ಬೋರ್ಡ್ ಸರಿಪಡಿಸಲು ಇನ್ನೂ ಎರಡು ಮೂರು ದಿನಬೇಕು. ಸಧ್ಯಕ್ಕೆ ಕಾಲ್ ಸೆಂಟರ್ ಮೂಲಕ ಕರೆಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳಲಾಗಿದೆ. 108 ತುರ್ತುಸೇವೆಯಾಗಿರುವುದರಿಂದ ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಹೆಚ್ ಪಿ ಕಂಪನಿ ಬೆಂಬಲವನ್ನೂ ಕೋರಲಾಗಿದೆ ಎಂದು ಹೇಳಿದರು.