ರಾಷ್ಟ್ರದ ವಿವಿಧೆಡೆ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರಲ್ಲದೆ, ಕೆಲ ನಾಯಕರನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಇದನ್ನು ವಿರೋಧಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಇದರ ಮಧ್ಯೆ ಪುಣೆಯಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲ ಪಿಎಫ್ಐ ಕಾರ್ಯಕರ್ತರು, ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಪ್ರತಿಭಟನಾಕಾರರನ್ನು ಪೊಲೀಸ್ ವ್ಯಾನ್ ಗೆ ಹತ್ತಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪಾಕ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ಗುರುತಿಸುವ ಕಾರ್ಯ ಪೊಲೀಸರಿಂದ ನಡೆಯುತ್ತಿದೆ.