ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಹಗ್ಗಜಗ್ಗಾಟ ಜೋರಾಗಿದೆ. ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿರುವಾಗ್ಲೇ ಎನ್ಸಿಪಿ ಕೂಡ ಅಖಾಡಕ್ಕೆ ಇಳಿದಿದೆ.
ಸಿಎಂ ಕುರ್ಚಿಯಲ್ಲಿ ಪುತ್ರ ಶ್ರೀಕಾಂತ್ ಶಿಂಧೆ ಕುಳಿತಿರುವ ಫೋಟೋ ಒಂದನ್ನು ಎನ್ಸಿಪಿ ವಕ್ತಾರ ರವಿಕಾಂತ್ ವರ್ಪೆ ಟ್ವೀಟ್ ಮಾಡಿದ್ದಾರೆ. ಏಕನಾಥ್ ಶಿಂಧೆ ಹಾಗೂ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
“ಶ್ರೀಕಾಂತ್ ಶಿಂಧೆ ಸೂಪರ್ ಸಿಎಂ ಆಗಿದ್ದಕ್ಕೆ ಶುಭ ಹಾರೈಕೆಗಳು. ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಅವರ ಚಿರಂಜೀವಿ, ಸಿಎಂ ಹುದ್ದೆಯಲ್ಲಿದ್ದಾರೆ. ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದ್ದಾರೆ. ಇದು ಯಾವ ರೀತಿಯ ರಾಜಧರ್ಮ? ಈ ಫೋಟೋ ಸಿಎಂ ಅಧಿಕೃತ ನಿವಾಸದಲ್ಲಿರುವ ಕಚೇರಿಯಿಂದ ಬಂದಿದೆ. ಮುಖ್ಯಮಂತ್ರಿಗಳು ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಆದ್ರೆ ಮಗ ಶ್ರೀಕಾಂತ್ ಶಿಂಧೆ ಸಿಎಂ ಕುರ್ಚಿಯಲ್ಲಿ ಕುಳಿತು ಸಭೆ ಮಾಡ್ತಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಗಣಪತಿ ಮಂಡಲ, ನವರಾತ್ರಿ ಉತ್ಸವ, ಪಿತೃಪಕ್ಷ ಇಂತಹ ಕಾರ್ಯಕ್ರಮಗಳಲ್ಲಿ ನಿರತರಾಗಿರೋ ಕಾರಣ ರಾಜ್ಯದ ಇತರ ಜನರ ಕೆಲಸವನ್ನು ನೋಡುವ ಜವಾಬ್ದಾರಿಯನ್ನು ಪುತ್ರನಿಗೆ ನೀಡಲಾಗಿದೆ. ಶ್ರೀಕಾಂತ್ ಶಿಂಧೆ ಸೂಪರ್ ಸಿಎಂ. ನಿಜವಾಗಿಯೂ ರಾಜ್ಯದ ವ್ಯವಹಾರಗಳನ್ನು ಯಾರು ನಿಭಾಯಿಸ್ತಿದ್ದಾರೆʼʼ ಅಂತಾ ಎನ್ಸಿಪಿ ವಕ್ತಾರ ಸವಾಲು ಹಾಕಿದ್ದಾರೆ.
ಸಿಎಂ ಕುರ್ಚಿಯನ್ನು ಎಲ್ಲರೂ ಗೌರವಿಸುತ್ತಾರೆ, ಅಧಿಕೃತ ಸಭೆಗಳು ಅಥವಾ ಅನೌಪಚಾರಿಕ ಸಭೆಗಳಲ್ಲಿ ಭಾಗವಹಿಸಲು ಬಯಸಿದರೆ ಸಿಎಂ ಕುರ್ಚಿಯ ಪಕ್ಕದಲ್ಲಿ ಕುಳಿತುಕೊಳ್ಳಬೇಕು. ಇದು ಮಹಾರಾಷ್ಟ್ರದ 13 ಕೋಟಿ ಜನರ ಸ್ವಾಭಿಮಾನದ ಸ್ಥಾನ ಎಂದಿರೋ ರವಿಕಾಂತ್ ವರ್ಪೆ, ಏಕನಾಥ್ ಶಿಂಧೆ ಪುತ್ರನ ನಡೆಯನ್ನು ಖಂಡಿಸಿದ್ದಾರೆ.