ಬೆಂಗಳೂರು: ನಾಡಹಬ್ಬ ದಸರಾ, ನವರಾತ್ರಿ ಉತ್ಸವದ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ ಸರಕಾರ ವಿದ್ಯುತ್ ದರ ಏರಿಸಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ. ವಿಧಾನಮಂಡಲ ಅಧಿವೇಶನ ಮುಂದೂಡಿಕೆಯಾದ ಕೂಡಲೇ ವಿದ್ಯುತ್ ದರ ಏರಿಕೆ ಆಗಿದೆ! ಏನೀ ಹುನ್ನಾರ? ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರಕಾರ, ಕರೆಂಟ್ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ. ಪ್ರತಿ ಯೂನಿಟ್ʼಗೆ 24ರಿಂದ 43 ಪೈಸೆ ಹೆಚ್ಚಿಸಿರುವುದು ಅವೈಜ್ಞಾನಿಕ, ಅನಪೇಕ್ಷಿತ ಹಾಗೂ ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ವಿದ್ಯುತ್ ಉತ್ಪಾದನೆ ಉತ್ತಮವಾಗಿದೆ. ಆದರೂ ಖರೀದಿ ವೆಚ್ಚದಲ್ಲಿ 1,244 ಕೋಟಿ ರೂ. ಹೆಚ್ಚಳ ಆಗಿದೆ ಎನ್ನುವ ಲೆಕ್ಕವನ್ನು ನಂಬುವ ರೀತಿಯಲ್ಲಿ ಇಲ್ಲ. ಇಂಧನ ವಲಯದ ಕೆಲ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಎಸ್ಕಾಂಗಳ ಭುಜದ ಮೇಲೆ ಗುಂಡಿಟ್ಟು, ಜನರಿಗೆ ಹೊಡೆಯುವ ಕೆಲಸ ಆಗುತ್ತಿದೆ ಎಂದು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸೋರಿಕೆ, ಕಳವು ತಡೆಯಲಾಗದ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳದ ಬಿಜೆಪಿ ಸರ್ಕಾರ ಅದಕ್ಷತೆಯ ಆಡಂಬೋಲ. ʼಬಡವರನ್ನು ಸುಲಿದು ಬಿಸ್ನೆಸ್ ಕ್ಲಾಸಿನ ಜನರ ಜೇಬು ತುಂಬುʼ ಎನ್ನುವುದು ಬಿಜೆಪಿ ತತ್ವ. ಅದನ್ನೇ ಕರ್ನಾಟಕದಲ್ಲೂ ಎಗ್ಗಿಲ್ಲದೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.