ಬೆಂಗಳೂರು: ಬಿಎಂಎಸ್ ಟ್ರಸ್ಟ್ ಆಕ್ರಮದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ದಾಖಲೆ ಸಹಿತ ದೂರು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಅಕ್ರಮದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಪ್ರಧಾನಿ ಮೋದಿಯವರಿಗೆ ದಾಖಲೆ ಸಹಿತ ದೂರು ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಟ್ರಸ್ಟ್ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದ ನಡೆದ ಭಾರಿ ಹಗರಣ ಇದಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತನಾಡುವ ಪ್ರಧಾನಿಯವರು ತಮ್ಮದೇ ಪಕ್ಷದ ಸರ್ಕಾರದ ಸಚಿವರೊಬ್ಬರ ಬ್ರಹ್ಮಾಂಡ ಅಕ್ರಮ ಕುರಿತಂತೆ ಕ್ರಮ ಕೈಗೊಳ್ಳಲು ದಾಖಲೆ ಸಹಿತ ದೂರು ನೀಡುತ್ತೇನೆ ಎಂದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ತನಿಖೆ ನಡೆಸುವ ಧೈರ್ಯವಿಲ್ಲ. ಭ್ರಷ್ಟಾಚಾರ ಹೊರ ಬಂದರೆ ಸರ್ಕಾರದ ಬುಡಕ್ಕೇ ಬರುತ್ತದೆ ಎನ್ನುವ ಆತಂಕವಿದೆ. ಕಾಣದ ಒಂದು ಕೈ ಈ ಹಗರಣದ ಹಿಂದೆ ಇದೆ. ಹೀಗಾಗಿ ಸರ್ಕಾರ ತನಿಖೆಗೆ ಒಪ್ಪುತ್ತಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಣ್ಣಿಗೆ ಕಟ್ಟಿದಂತೆ ದಾಖಲೆ ಇದೆ. ಅಕ್ರಮ ನಡೆದಿದೆ. ಆದರೆ, ಕಾಣದ ಕೈಗಳು ತನಿಖೆಗೆ ತಡೆ ಹಾಕುತ್ತಿವೆ ಎಂದು ಆರೋಪಿಸಿದ ಅವರು, ಉನ್ನತ ಶಿಕ್ಷಣ ಸಚಿವರು ದೊಡ್ಡಮಟ್ಟದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ನಾನು ಸದನದಲ್ಲಿ ಪ್ರಸ್ತಾಪಿಸಿದಾಗ ಯಾರೂ ವಿರೋಧ ಮಾಡಲಿಲ್ಲ. ಎಲ್ಲರಿಗೂ ಹಗರಣದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಲೋಕಾಯುಕ್ತರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.