ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಮಕ್ಕಳ ತಜ್ಞ ವೈದ್ಯರಾಗಿರುವ ಯಾದಗಿರಿ ಮೂಲದ ಡಾ. ಎಂ ಶ್ರೀನಿವಾಸ್ ಈಗ ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಎಂದು ಹೆಗ್ಗಳಿಕೆ ಪಡೆದಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಯಾದಗಿರಿ ನಿವಾಸಿ ದಿ. ಆಶಪ್ಪ ಅವರ ಹಿರಿಯ ಪುತ್ರರಾದ ಶ್ರೀನಿವಾಸ್ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ಟೇಷನ್ ಬಜಾರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಡೆದುಕೊಂಡಿದ್ದರು.
ಬಳಿಕ ನ್ಯೂ ಕನ್ನಡ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ ಬಳಿಕ ಯಾದಗಿರಿಯ ಕಾಲೇಜಿನಲ್ಲಿ ಪಿಯುಸಿ, ಬಳ್ಳಾರಿಯ ವಿಮ್ಸ್ ನಲ್ಲಿ ವೈದ್ಯಕೀಯ ಪದವಿ ಹಾಗೂ ದಾವಣಗೆರೆಯಲ್ಲಿ ಎಂ.ಎಸ್. ಪದವಿ ಪಡೆದಿದ್ದು ಏಮ್ಸ್ ನಲ್ಲಿ ಎಂಸಿಎಚ್ ವ್ಯಾಸಂಗ ಮಾಡಿದ್ದಾರೆ.
ಖ್ಯಾತ ಮಕ್ಕಳ ತಜ್ಞ ವೈದ್ಯರಾದ ಇವರನ್ನು ಮುಂದಿನ ಐದು ವರ್ಷಗಳ ಕಾಲ ಏಮ್ಸ್ ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ನೇಮಕ ಮಾಡಿದ್ದು, ಸೆಪ್ಟೆಂಬರ್ 9 ರಂದು ಈ ಕುರಿತ ಆದೇಶ ಹೊರ ಬಿದ್ದಿದೆ.