ತಮ್ಮ ಪಕ್ಷದ ಸಚಿವ, ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಉದ್ಧವ್ ಠಾಕ್ರೆ ಮತ್ತವರ ಬಣಕ್ಕೆ ದಸರಾ ಹಬ್ಬದ ಸಂದರ್ಭದಲ್ಲಿ ಶುಭ ಸುದ್ದಿ ಸಿಕ್ಕಿದೆ.
ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ನಲ್ಲಿ ದಸರಾ ಸಮಾವೇಶ ಆಯೋಜಿಸುವ ಕುರಿತಂತೆ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಠಾಕ್ರೆ ಬಣದ ನಡುವೆ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.
ತಮ್ಮದೇ ನಿಜವಾದ ಶಿವಸೇನೆ ಎಂದು ಉಭಯ ಬಣಗಳು ಪ್ರತಿಪಾದಿಸುತ್ತಿದ್ದು, ದಸರಾ ಸಮಾವೇಶ ಆಯೋಜಿಸುವ ಕುರಿತಂತೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ಬಾಂಬೆ ಹೈಕೋರ್ಟ್ ಆದೇಶ ಹೊರ ಬಿದ್ದಿದ್ದು, ದಸರಾ ಸಮಾವೇಶ ಆಯೋಜಿಸುವ ಪಾರಂಪರಿಕ ಅವಕಾಶವನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ನೀಡಲಾಗಿದೆ. ಹೀಗಾಗಿ ಏಕನಾಥ್ ಶಿಂಧೆ ಬಣಕ್ಕೆ ತೀವ್ರ ಮುಖಭಂಗ ಉಂಟಾಗಿದೆ.