ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ರಕ್ಷಿತಾ ಬಾಯಿ ಅವರ ಕುಟುಂಬಕ್ಕೆ 8 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಶೇಖರನಾಯ್ಕ ಮತ್ತು ಲಕ್ಷ್ಮಿಬಾಯಿ ದಂಪತಿಯ ಪುತ್ರಿಯಾಗಿರುವ ರಕ್ಷಿತಾ ಚಿಕ್ಕಮಗಳೂರಿನ ಬಸವನಹಳ್ಳಿಯ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದರು. ರಕ್ಷಿತಾ ಅಪಘಾತದಲ್ಲಿ ಮೃತಪಟ್ಟಿದ್ದರು.
ಸೆ. 18 ರಂದು ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಬಸ್ ನಲ್ಲಿ ಹೋಗುವಾಗ ಆಯತಪ್ಪಿ ಬಿದ್ದು ತಲೆಗೆ ಪೆಟ್ಟಾಗಿತ್ತು. ಅವರ ಮಿದುಳು ನಿಷ್ಕ್ರಿಯಗೊಂಡಿದ್ದು, ಪುತ್ರಿ ಬದುಕುವುದಿಲ್ಲ ಎಂಬುದನ್ನು ತಿಳಿದ ಪೋಷಕರು ಕಣ್ಣು, ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್ ದಾನ ಮಾಡಿದ್ದರು.
ರಕ್ಷಿತಾ ಓದುತ್ತಿದ್ದ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಕಣ್ಣೀರಿಟ್ಟಿದ ದೃಶ್ಯ ಮನ ಕಲಕುವಂತಿತ್ತು. ರಕ್ಷಿತಾ ಬಾಯಿ ಸಾವಿಗೆ ಜನ ಕೂಡ ಕಂಪನಿ ಮಿಡಿದಿದ್ದರು. ಹೀಗೆ ಸಾವಿನಲ್ಲಿ ಸಾರ್ಥಕತೆ ಮೆರೆದ ರಕ್ಷಿತಾ ಬಾಯಿ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ, ತಾಂಡಾ ಅಭಿವೃದ್ಧಿ ನಿಗಮದಿಂದ ಒಂದು ಲಕ್ಷ ರೂ., ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.