ಶಿವಮೊಗ್ಗ: ಶಿವಮೊಗ್ಗದಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಮೂವರು ಶಂಕಿತ ಉಗ್ರರು ರಾಜ್ಯದ್ಯಲ್ಲಿ ಕೆಲವೇ ದಿನಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಬಂಧಿತ ಮೂವರು ಶಂಕಿತರು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತಕ್ಕೆ ಬದ್ಧರಾಗಿದ್ದು, ಇಸ್ಲಾಮಿಕ್ ಸ್ಟೇಟ್ ನಿರ್ಮಾಣ, ಷಿರಿಯಾ ಕಾನೂನುಗಳಿಂದ ಮಾತ್ರ ಸ್ವಾತಂತ್ರ್ಯ ಸಾರ್ಥಕ ಎಂಬ ಅಭಿಯಾನವನ್ನು ಹೊಂದಿದ್ದರು ಎಂದು ಜಿಲ್ಲಾ ಎಸ್ ಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.
ಈವರೆಗೆ 11 ಸ್ಥಳಗಳಲ್ಲಿ ದಾಳಿ ಮಾಡಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 14 ಮೊಬೈಲ್, 1 ಡೊಂಗಲ್, ಎರಡು ಲ್ಯಾಪ್ ಟಾಪ್, ಒಂದು ಪೆನ್ ಡ್ರೈವ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತುಂಗಾನದಿಯ ಕಮ್ಮನಗುಂಡಿ ಬಳಿ ಕೆಲ ಸ್ಫೋಟಗಳು ಪತ್ತೆಯಾಗಿವೆ. ಶಂಕಿತರು ಬಾಂಬ್ ತಯಾರಿಸಿ ಟ್ರೈಯಲ್ ನಡೆಸಿದ್ದರು. ಸ್ಥಳದಲ್ಲಿ ಟೈಮರ್, ರಿಲೆ ಸರ್ಕ್ಯೂಟ್, 9 ವೋಲ್ಟ್ ಬ್ಯಾಟರಿ, ಸ್ವಿಚ್, ವೈರ್ ಗಳು, ಮ್ಯಾಚ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಇನ್ನು ಆಗಸ್ಟ್ ನಲ್ಲಿ ರಾಷ್ಟ್ರಧ್ವಜವನ್ನು ಸುಟ್ಟಿರುವ ಬಗ್ಗೆ ಕುರುಹು ಪತ್ತೆಯಾಗಿವೆ. ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಅಂಶ ಬಯಲಾಗಿದೆ ಎಂದು ತಿಳಿಸಿದ್ದಾರೆ.