ಬೆಂಗಳೂರು: ಬಿಎಂಎಸ್ ಟ್ರಸ್ಟ್, ಜಮೀನು ಅಕ್ರಮದ ಬಗ್ಗೆ ಸರ್ಕಾರ ತನಿಖೆಗೆ ಒಪ್ಪದ ಹಿನ್ನೆಲೆಯಲ್ಲಿ ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ವಿಧಾನಸಭೆ ಕಲಾಪ ಪುನರಾರಂಭವಾಗಿದೆ.
ವಿಧಾನಸಭಾ ಕಲಾಪ ಪುನರಾರಂಭವಾಗುತ್ತಿದಂತೆ ಜೆಡಿಎಸ್ ಸದಸ್ಯರು ಬಿಎಂಎಸ್ ಅಕ್ರಮ ತನಿಖೆಗೆ ಆಗ್ರಹಿಸಿ ಮತ್ತೆ ಸದನದಲ್ಲಿ ಧರಣಿ ಮುಂದುವರೆಸಿದರು. ಧರಣಿ ನಡೆಸುವುದಾದರೆ ಸದನದ ಹೊರಹೋಗಿ ಧರಣಿ ನಡೆಸುವಂತೆ ಸ್ಪೀಕರ್ ಸೂಚಿಸಿದರು. ಅಲ್ಲದೇ ವಿಧೇಯಕಗಳನ್ನು ಮಂಡಿಸುವಂತೆ ಸಿಎಂ ಬೊಮ್ಮಾಯಿ ಅವರಿಗೆ ಸೂಚಿಸಿದರು.
ಸ್ಪೀಕರ್ ಸೂಚನೆ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ವಿಧೇಯಕಗಳ ಮಂಡನೆಗೆ ಮುಂದಾದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಜೆಡಿಎಸ್ ಸದಸ್ಯ ಅನ್ನದಾನಿ ಸ್ಪೀಕರ್ ಪೀಠಕ್ಕೆ ಮುತ್ತಿಗೆಹಾಕಲು ಯತ್ನಿಸಿದರು. ಗದ್ದಲ ಕೋಲಾಹಲಗಳ ನಡುವೆಯೇ ಸಿಎಂ ಬೊಮ್ಮಾಯಿ ಎಸ್ ಟಿ ಮೀಸಲಾತಿ ವಿಚಾರವಾಗಿ ಶೀಘ್ರದಲ್ಲಿಯೇ ಸರ್ವಪಕ್ಷಗಳ ಸಭೆ ಕರೆಯುವುದಾಗಿ ತಿಳಿಸಿದರು. ವಿಧೇಯಕಗಳ ಮಂಡನೆ ಮಾಡಿದರು.