ಎಂದಿನಂತೆ ಬೆಳ್ಳಂಬೆಳಿಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಶಾಕ್ ಆಗಿದ್ದರು. ಇವರೆಲ್ಲರೂ ಶಾಲೆಗೆ ಬರುವ ಮುಂಚೆಯೇ ವಿಶೇಷ ಅತಿಥಿ, ಇವರೆಲ್ಲರನ್ನೂ ವೆಲ್‌ಕಮ್ ಮಾಡುವುದಕ್ಕೆ ಕಾಯ್ತಾ ಇತ್ತು. ಆ ಅತಿಥಿಯೇ ದೈತ್ಯಾಕಾರದ ಮೊಸಳೆ. ಶಾಲೆಯ ಆವರಣದಲ್ಲಿ ಕಾಣಿಸಿಕೊಂಡ ಮೊಸಳೆಯಿಂದಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಉತ್ತರ ಪ್ರದೇಶ ಅಲಿಗಢದ ಖಾಸಿಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡು ಎಲ್ಲರೂ ಬೆಚ್ಚಿಬೀಳಿಸುವಂತೆ ಮಾಡಿದೆ. ತಕ್ಷಣವೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಬಂದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ದಿವಾಕರ್ ವಸಿಷ್ಠ ಈ ಮೊಸಳೆಯನ್ನ ಸೆರೆ ಹಿಡಿದು ಕೊನೆಗೆ ಗಂಗಾ ನದಿಯಲ್ಲಿ ಬಿಡಲಾಯಿತು.
ಈ ಪ್ರದೇಶದಲ್ಲಿ ಹಲವಾರು ಕೆರೆಗಳಿದ್ದು, ಸಮೀಪದಲ್ಲೇ ಗಂಗಾ ನದಿ ಹರಿಯುತ್ತಿದೆ. ಗ್ರಾಮದ ಕೆರೆಗಳಲ್ಲಿ ಹಲವಾರು ಬಾರಿ ಮೊಸಳೆಗಳು ಕಾಣಿಸಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆ ನಂತರ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಣಿಟ್ಟಿದ್ದಾರೆ.