ಹಿಂದಿ ಚಿತ್ರರಂಗಕ್ಕೂ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಕೊಡುಗೆ ಅಪಾರ. ಕೇಳುಗರ ಮನದಲ್ಲಿ ಎಂದೆಂದಿಗೂ ಹಸಿರಾಗಿರುವಂತಹ ಸುಮಧುರವಾದ ಗೀತೆಗಳನ್ನು ಎಸ್ಪಿಬಿ ಹಾಡಿದ್ದಾರೆ. ʼಹಮ್ ಆಪ್ ಕೆ ಹೈ ಕೌನ್ʼ ಚಿತ್ರದ ಪೆಹಲಾ ಪೆಹಲಾ ಪ್ಯಾರ್ ಹೈ ಹಾಡು ಕೂಡ ಅವುಗಳಲ್ಲೊಂದು.
ಸ್ವತಃ ಬಾಲಸುಬ್ರಮಣ್ಯಂ ಅವರೇ ಸಂಗೀತ ನಿರ್ದೇಶನ ಮಾಡಿ ಹಾಡಿರುವ ಗೀತೆ ಇದು. ಈ ಹಾಡಿನ ಮೂಲಕ ಎಸ್ಪಿಬಿ ಹಾಗೂ ಸಲ್ಮಾನ್ ಖಾನ್ ಹಿಟ್ ಜೋಡಿ ಎನಿಸಿಕೊಂಡಿದ್ದರು. ಈ ಹಾಡು ಸೂಪರ್ ಹಿಟ್ ಆದ ಬೆನ್ನಲ್ಲೇ 90ರ ದಶಕದಲ್ಲಿ ಸಲ್ಮಾನ್ ನಟಿಸಿರೋ ಹಲವು ಚಿತ್ರಗಳಲ್ಲಿ ಎಸ್ಪಿಬಿ ಹಾಡಿದ್ದರು.
ಏಕ್ ದೂಜೆ ಕೇ ಲಿಯೇ ಚಿತ್ರ ಕೂಡ ಭರ್ಜರಿ ಹಿಟ್ ಆಗಿತ್ತು. 1981ರಲ್ಲಿ ಬಿಡುಗಡೆಯಾದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ಬಾಲು, ಹಮ್ ಬನೇ ತುಮ್ ಬನೇ ಎಂಬ ಗೀತೆಗೆ ಧ್ವನಿಯಾಗಿದ್ದರು. ಲತಾ ಮಂಗೇಶ್ಕರ್ ಹಾಗೂ ಎಸ್ಪಿಬಿ ಹಾಡಿದ್ದ ಈ ಹಾಡು ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ.
ಇನ್ನು ರೋಜಾ ಚಿತ್ರವನ್ನಂತೂ ಸಿನಿಪ್ರಿಯರು ಮರೆತಿಲ್ಲ. ಈ ಸಿನೆಮಾದ ಯೇ ಹಸೀನ್ ವಾದಿಯಾ ಹಾಡು ಬಾಲಸುಬ್ರಮಣ್ಯಂ ಹಾಗೂ ಕೆ.ಎಸ್.ಚಿತ್ರಾ ಅವರ ಕಂಠದಲ್ಲಿ ಮೂಡಿ ಬಂದಿತ್ತು. ಹಾಡಿಗೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನವಿದ್ದಿದ್ದು ವಿಶೇಷ.
https://www.youtube.com/watch?v=CuhoU0pmip8
ಸಲ್ಮಾನ್ ಖಾನ್ ಹಾಗೂ ಭಾಗ್ಯಶ್ರೀ ಅಭಿನಯದ ಮೈನೆ ಪ್ಯಾರ್ ಕಿಯಾ ಚಿತ್ರದಲ್ಲೂ ಎಸ್ಪಿಬಿ ಅವರ ಸಿರಿಕಂಠ ಕೇಳುಗರಿಗೆ ಮೋಡಿ ಮಾಡಿತ್ತು. ಮೇರೆ ರಂಗ್ ಮೇ ರಂಗನೆ ವಾಲಿ ಹಾಡನ್ನು ಚಿತ್ರಪ್ರಿಯರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ಪ್ರೆಸ್ ಚಿತ್ರದಲ್ಲೂ ಬಾಲಸುಬ್ರಮಣ್ಯಂ ಹಾಡಿದ್ದಾರೆ. ಈ ಮೂಲಕ 15 ವರ್ಷಗಳ ನಂತರ ಅವರು ಹಿಂದಿ ಚಿತ್ರರಂಗಕ್ಕೆ ಮರಳಿದ್ದರು. ಎಸ್ಪಿಬಿ ಕಂಠದಲ್ಲಿ ಮೂಡಿಬಂದಿದ್ದ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್ ಆಗಿತ್ತು.