ಬೆಂಗಳೂರು: ಪೇಸಿಎಂ ಕುರಿತ ಚರ್ಚೆ ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ವಿಪಕ್ಷ ಸದಸ್ಯರು ಪರಸ್ಪರ ಧರಣಿ ನಡೆಸಿ ಗದ್ದಲ-ಕೋಲಾಹಲಕ್ಕೆ ಕಾರಣರಾದರು.
ಕಾಂಗ್ರೆಸ್ ಸದಸ್ಯರು ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಪೇಸಿಎಂ ಪೋಸ್ಟರ್ ಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಸದಸ್ಯರು ಪೋಸ್ಟರ್ ಹಿಡಿದು ಧರಣಿ ನಡೆಸಿದರು.
ಸರ್ಕಾರದ ವಿರುದ್ಧ ಕೆಂಡ ಕಾರಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಮೀಡಿಯಾ ಚೀಫ್ ಬಿ.ಆರ್. ನಾಯ್ಡು ಸೇರಿದಂತೆ ಐವರನ್ನು ಬಂಧಿಸಿದ ಕ್ರಮ ಸರಿಯಲ್ಲ. ಅವರ ಮೇಲೆ ಯಾವ ಕೇಸ್ ಇದೆ ಎಂದು ರಾತ್ರೋ ರಾತ್ರಿ ಬಂಧಿಸಿ ಕರೆದೊಯ್ದಿದ್ದಾರೆ ಎಂದು ಪ್ರಶ್ನಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೂ ಬರೆಯಬಹುದು. ಬಿಜೆಪಿಯವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನಿದ್ದೆ ರಾಮಯ್ಯ ಎಂದಾಗ ಯಾರನ್ನಾದರೂ ಬಂಧಿಸಿದ್ದರಾ ? 10% ಕಮಿಷನ್ ಬಗ್ಗೆ ‘ವಿಶ್ವಗುರು’ ಹೇಳಿದಾಗ ಕ್ರಮ ಆಯ್ತಾ ? ಸಿದ್ದರಾಮಯ್ಯ, ಬಿ.ಟಿ. ಲಲಿತಾನಾಯಕ್, ನನಗೆ ಬೆದರಿಕೆ ಪತ್ರ ಕಳುಹಿಸಿದರು. ಬೆದರಿಕೆ ಪತ್ರ ಬಂದಾಗ ಏನಾದ್ರೂ ಕ್ರಮ ಕೈಗೊಂಡಿದ್ದಾರಾ ? ಸರ್ಕಾರ ಇರೋದು ಬಿಜೆಪಿಗೆ ಮಾತ್ರನಾ ? ಇಲ್ಲಾ ಎಲ್ಲರಿಗೂ ಇದ್ಯಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಪೋಸ್ಟರ್ ಹಿಡಿದು ಭ್ರಷ್ಟ ಕಾಂಗ್ರೆಸ್ ಗೆ ಧಿಕ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದರು. ಸರ್ಕಾರದ ವಿರುದ್ಧ ಕಾಂಗ್ರೆಸ್ ಘೋಷಣೆ ಕೂಗುತ್ತಿದ್ದಂತೆ ಸದನದಲ್ಲಿ ಗದ್ದಲ-ಕೋಲಾಹಲ ಹೆಚ್ಚಾಗತೊಡಗಿತು. ಗದ್ದಲದ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಸದನದಿಂದಲೇ ಹೊರ ನಡೆದ ಪ್ರಸಂಗ ನಡೆದಿದೆ.