ಇದೊಂದು ಪೈಶಾಚಿಕ ಪ್ರಕರಣವಾಗಿದ್ದು, ಬರೇಲಿಯಲ್ಲಿ ಗರ್ಭಿಣಿ ಮೇಲೆ ಮೂವರು ಪುರುಷರು ಅತ್ಯಾಚಾರವೆಸಗಿದ್ದು ಆಕೆಯ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ.
ಆಕೆಯ ಪತಿ ನೀಡಿದ ದೂರಿನ ಪ್ರಕಾರ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು ಪುರುಷರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಮೂರು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಗೆ ಗರ್ಭಪಾತವಾಗಿದೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯು ಸೆಪ್ಟೆಂಬರ್ 13 ರಂದು ಸಂಭವಿಸಿದ್ದು, ಮಹಿಳೆಯ ಪತಿ ಸೆಪ್ಟೆಂಬರ್ 16 ರಂದು ಬರೇಲಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಮಂಗಳವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸತ್ಯಾಂಶ ಹೊರಬಿದ್ದ ನಂತರ ಮುಂದಿನ ಕ್ರಮ ಕೆೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಜ್ಕುಮಾರ್ ಅಗರವಾಲ್ ತಿಳಿಸಿದ್ದಾರೆ.
ಮಹಿಳೆಯ ಪತಿ, ಘಟನೆಯ ದಿನದಂದು ಅವರು ದೂರು ನೀಡಿದ್ದರೂ ಪೊಲೀಸರು ಸ್ವೀಕರಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಪತ್ನಿಯ ಆರೋಗ್ಯ ಹದಗೆಟ್ಟಿದ್ದರಿಂದ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಅಂಚೆ ಮೂಲಕ ದೂರು ನೀಡಿದ್ದು, ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.