ಬೆಂಗಳೂರು: ದೇಶದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ-NIA ಪಿಎಫ್ ಐ ಹಾಗೂ ಎಸ್ ಡಿಪಿಐ ಸಂಘಟನೆಗಳ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿಯೂ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದು, ಪಿ ಎಫ್ ಐ ಮುಖಂಡ ಅಜೂಜ್ ಅಬ್ದುಲ್ ಹೊನ್ನಾವರ್ ಅವರ ಟಿಪ್ಪುನಗರದಲ್ಲಿರುವ ನಿವಾಸದ ಮೇಲೆ ಮುಂಜಾನೆಯೇ ದಾಳಿ ನಡೆಸಿದ್ದಾರೆ. ದಾಳಿ ವೇಳೆ 1 ಲ್ಯಾಪ್ ಟಾಪ್, ಮೊಬೈಲ್, ಕೆಲ ಪುಸ್ತಕಗಳು ಸೇರಿದಂತೆ ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಅಜೂಜ್ ಅಬ್ದುಲ್ ನನ್ನು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಕೊಪ್ಪಳದಲ್ಲಿಯೂ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದು, ಪಿಎಫ಼್ ಐ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಫಯಾಜ್ ನಿವಾಸದ ಮೇಲೆ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಫಯಾಜ್ ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದಿದ್ದಾರೆ ಎಂದು ತಿಳಿದುಬಂದಿದೆ.