ಯಾವುದೇ ನೌಕರರಿಗೆ ಬೋನಸ್ ಎಂಬುದು ಸಂಭ್ರಮದ ಗಳಿಗೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಈ ಬೋನಸ್ ಸಿಕ್ಕರೆ ಅದರಿಂದ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಾರೆ. ಹೀಗೆ ಬೋನಸ್ ಪಡೆದ ಕಂಪನಿಯೊಂದರ ನೌಕರರು ಈಗ ನೋಟಿಸ್ ಸ್ವೀಕರಿಸುವಂತಾಗಿದೆ.
ಹೌದು, ಅಮೆರಿಕದಲ್ಲಿರುವ ಜಪಾನ್ ಕಾರು ತಯಾರಿಕಾ ಕಂಪನಿ ಹೋಂಡಾ ತನ್ನ ನೌಕರರ ಖಾತೆಗೆ ನಿಗದಿಯಾಗಿದ್ದಕ್ಕಿಂತ ಹೆಚ್ಚು ಬೋನಸ್ ಜಮಾ ಮಾಡಿದೆ. ಬೋನಸ್ ಸಿಕ್ಕಿದ ಖುಷಿಯಲ್ಲಿ ನೌಕರರು ಸಹ ಅದನ್ನು ಖರ್ಚು ಮಾಡಿಕೊಂಡಿದ್ದಾರೆ.
ಆದರೆ ಬಳಿಕ ಕಂಪನಿಗೆ ಈ ಪ್ರಮಾದದ ಅರಿವು ಆಗಿದ್ದು, ಹೆಚ್ಚುವರಿಯಾಗಿ ಪಾವತಿಸಿರುವ ಬೋನಸ್ ಹಣವನ್ನು ಮರಳಿಸುವಂತೆ ನೌಕರರಿಗೆ ನೋಟಿಸ್ ನೀಡಿದೆ. ಒಂದು ವೇಳೆ ಪಾವತಿಸದಿದ್ದರೆ ಅವರ ವೇತನದಲ್ಲಿ ಕಡಿತಗೊಳಿಸುವುದಾಗಿ ತಿಳಿಸಿದೆ.
ಮೂಲಗಳ ಪ್ರಕಾರ ಕೆಲವೊಬ್ಬರು ನೌಕರರಿಗೆ ಬೋನಸ್ ಹಣದಲ್ಲಿ ಶೇಕಡ 8ರಷ್ಟು ಮರುಪಾವತಿಸುವಂತೆ ಮೆಮೋ ನೀಡಲಾಗಿದ್ದು, ಹೀಗಾಗಿ ಹಣ ಖರ್ಚು ಮಾಡಿಕೊಂಡಿರುವ ನೌಕರರು ಚಿಂತೆಗೊಳಗಾಗಿದ್ದಾರೆ. ಆದರೆ ಕಂಪನಿ ಮಾತ್ರ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ.