alex Certify ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದೆ ರೋಚಕ; ಬಂಧನಕ್ಕೊಳಗಾದವನ ಮೊಬೈಲ್‌ ನಲ್ಲಿತ್ತು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದೆ ರೋಚಕ; ಬಂಧನಕ್ಕೊಳಗಾದವನ ಮೊಬೈಲ್‌ ನಲ್ಲಿತ್ತು ಮಾಹಿತಿ

ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನದಂದು ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಸಂಬಂಧ ಉಂಟಾದ ಗಲಭೆಯ ಸಂದರ್ಭದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿತವಾಗಿತ್ತು.

ಈ ಸಂದರ್ಭದಲ್ಲಿ ಬಂಧಿಸಲ್ಪಟ್ಟ ಆರೋಪಿಯ ಮೊಬೈಲ್ ಮಾಹಿತಿಯಿಂದ ಶಿವಮೊಗ್ಗ ಮತ್ತು ಇತರೆಡೆ ಐಸಿಸ್ ಸಂಘಟನೆಯ ಜೊತೆ ನಂಟಿರುವ ಮಾಹಿತಿ ಹೊರಬಿದ್ದಿದೆ. ಪೊಲೀಸರು ಈ ಮಾಹಿತಿಯನ್ನು ಅನುಸರಿಸಿ ಉಗ್ರ ಚಟುವಟಿಕೆಯಲ್ಲಿ ನಿರತವಾಗಿದ್ದ ಜಾಲವೊಂದನ್ನು ಬಯಲಿಗೆಳೆದಿದ್ದಾರೆ.‌

ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾರೀಕ್ ಈ ಜಾಲದ ಕಿಂಗ್‍ಪಿನ್ ಆಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಶಿವಮೊಗ್ಗ ಸಿದ್ದೇಶ್ವರ ನಗರದ ಸೈಯದ್ ಯಾಸೀನ್ ಮತ್ತು ಮಂಗಳೂರಿನ ಮಾಜಾ ಮುನೀರ್ ಅಹ್ಮದ್ ಎಂಬಿಬ್ಬರು ಆತನ ಜೊತೆಗೆ ಸೇರಿ ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ದುಷ್ಕೃತ್ಯಗಳಿಗೆ ಸಂಚು ನಡೆಸುತ್ತಿದ್ದರು ಎಂಬ ಭಯಾನಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಸೆ.19ರಂದು ಯಾಸೀನ್ ಮತ್ತು ಮಾಜಾ ಮುನೀರ್ ಅಹ್ಮದ್‍ರನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದು ಅವರ ಸಂಪೂರ್ಣ ಚಲನವಲನಗಳ ಮತ್ತು ಶಿವಮೊಗ್ಗದಲ್ಲಿ ಅವರ ಕಾರ್ಯಕ್ಷೇತ್ರದ ಮಾಹಿತಿಯನ್ನು ಇಂಚಿಂಚೂ ಜಾಲಾಡುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಸೆಪ್ಟಂಬರ್ 29ರ ವರೆಗೆ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ನಿನ್ನೆ ಪೊಲೀಸರು ಯಾಸೀನ್‍ನ ಸಿದ್ದೇಶ್ವರ ನಗರದ ಮನೆಗೆ ತೆರಳಿ, ದಾಖಲೆ ಪರಿಶೀಲಿಸಿದ್ದಾರೆ.

ಆರೋಪಿಗಳು ಹಳೇ ಗುರುಪುರದ ತುಂಗಾ ನದಿ ಬಳಿ ಬಾಂಬ್ ಬ್ಲಾಸ್ಟಿಂಗ್‍ನ ರಿಹರ್ಸಲ್ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ. ಹಾಗೆಯೇ ಅಬ್ಬಲಗೆರೆ ಈಶ್ವರ ವನದ ಹತ್ತಿರ ಗಿಡಗಂಟಿಗಳ ನಡುವೆ ದುಷ್ಕೃತ್ಯಕ್ಕೆ ಸಂಚು ನಡೆಸಿದ್ದ ಬಗ್ಗೆ ಮಾಹಿತಿ ಪಡೆದ ತನಿಖಾ ತಂಡ ಇಂದು ಬೆಳಿಗ್ಗೆ ಸ್ಥಳಕ್ಕೆ ತೆರಳಿ ಮಹತ್ವದ ಮಾಹಿತಿಯನ್ನು ಕಲೆಹಾಕಿದೆ.

ಎಸ್‍ಪಿ ಡಾ. ಬಿ.ಎಂ. ಲಕ್ಷ್ಮೀಪ್ರಸಾದ್ ನೇತೃತ್ವದ ಈ ವಿಶೇಷ ತಂಡದಲ್ಲಿ ಓರ್ವ ಎಎಸ್‍ಪಿ, ಮೂವರು ಡಿವೈಎಸ್‍ಪಿ, 8 ಮಂದಿ ಇನ್ಸ್ ಪೆಕ್ಟರ್, 10 ಸಬ್ ಇನ್ಸ್ ಪೆಕ್ಟರ್ ಹಾಗೂ 30 ಸಿಬ್ಬಂದಿಗಳು ತನಿಖೆ ಮುಂದುವರೆಸಿದ್ದು, ಇನ್ನಷ್ಟು ಮಾಹಿತಿಗಳು ಹೊರಬೀಳಲಿವೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...