ಬೆಂಗಳೂರು: ಸರ್ಕಾರದ ಆದೇಶ ಇದ್ದರೂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ವಿಧಾನಪರಿಷತ್ ಕಲಾಪದ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಪರಿಷತ್ ಕಲಾಪದ ವೇಳೆ ಪಾಂಡವಪುರ ಸಕ್ಕರೆ ಕಾರ್ಖಾನೆ ವಿಚಾರ ಪ್ರಸ್ತಾಪಿಸಿದ ಸಚಿವ ನಿರಾಣಿ, ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ 50 ಕೋಟಿ ಬಂಡವಾಳ ಹೂಡಿದ್ದೇನೆ. ಆದರೆ ಅಧಿಕಾರಿ ಪಂಕಜ್ ಕುಮಾರ್ ಅಗ್ರಿಮೆಂಟ್ ಮಾಡಿಕೊಡುತ್ತಿಲ್ಲ. ಸಿಎಂ ಹಾಗೂ ಸರ್ಕಾರದ ಸಚಿವರೇ ಸೂಚಿಸಿದರೂ ಕೂಡ ಬೇಜವಾಬ್ದಾರಿ ಮೆರೆದಿದ್ದಾರೆ. ಅಧಿಕಾರಿಯ ನಡೆ ಬೇಸರ ತಂದಿದೆ ಎಂದು ಸಚಿವರು ಅಸಹಾಯಕತೆ ತೋಡಿಕೊಂಡರು.
ಸರ್ಕಾರದ ಸಚಿವರೇ ಅಧಿಕಾರಿಗಳ ಬಗ್ಗೆ ಅಸಹಾಯಕತೆ ತೋರುತ್ತಿದ್ದಂತೆ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಸದಸ್ಯರು, ಸರ್ಕಾರ, ಸಚಿವರ ಮಾತನ್ನೇ ಅಧಿಕಾರಿಗಳು ಕೇಳುತ್ತಿಲ್ಲ ಎಂದ ಮೇಲೆ ಸರ್ಕಾರವನ್ನು ಹೇಗೆ ನಡೆಸುತ್ತಿದ್ದೀರಿ? ಸರ್ಕಾರ ಇದೆಯೋ ಇಲ್ಲವೋ? ಎಂದು ಪ್ರಶ್ನಿಸಿದಾರೆ.
ಅಂತಹ ಅಧಿಕಾರಿಯನ್ನು ಮೊದಲು ಸಸ್ಪೆಂಡ್ ಮಾಡಿ. ಸಚಿವರಿಗೇ ಹೀಗಾದರೆ ಇನ್ನು ಸಾಮಾನ್ಯ ಜನರ ಕಥೆಯೇನು? ಒಂದು ಸಚಿವರು ಸುಳ್ಳು ಹೇಳುತ್ತಿರಬೇಕು. ಇಲ್ಲ ಅಧಿಕಾರಿ ಸುಳ್ಳು ಹೇಳುತ್ತಿರಬೇಕು. ಇದೆಂಥಹ ಸರ್ಕಾರ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಬಿಜೆಪಿ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ ಕೋಲಾಹಲ ಆರಂಭವಾಯಿತು.