ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಿಂದಿ ಮಾತನಾಡುವವರೇ ಹೆಚ್ಚಾಗಿದ್ದಾರೆ. ಅಲ್ಲದೆ ಫಾರ್ಮ್ ಸೇರಿದಂತೆ ಬ್ಯಾಂಕುಗಳಲ್ಲಿರುವ ವಿವಿಧ ಸೂಚನಾ ಫಲಕಗಳಲ್ಲಿ ಸ್ಥಳೀಯ ಭಾಷೆಯನ್ನು ಕಡೆಗಣಿಸಿ ಇಂಗ್ಲಿಷ್ ಹಾಗೂ ಹಿಂದಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂಬ ಕೂಗು ಬಹಳ ಕಾಲದಿಂದ ಕೇಳಿ ಬರುತ್ತಿತ್ತು.
ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಭಾರತೀಯ ಬ್ಯಾಂಕುಗಳ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಸಿಬ್ಬಂದಿ ನೇಮಕಾತಿ ವೇಳೆ ಸ್ಥಳೀಯ ಭಾಷೆ ಮಾತನಾಡುವವರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ಕೊಟ್ಟಿದ್ದಾರೆ.
ಕೇವಲ ಹಿಂದಿ ಮಾತನಾಡುವ ಹಾಗೂ ಹಿಂದಿ ಮಾತನಾಡದವರನ್ನು ರಾಷ್ಟ್ರ ಪ್ರೇಮಿಗಳೇ ಅಲ್ಲ ಎಂದು ಹೇಳುವ ಸಿಬ್ಬಂದಿ ನೇಮಿಸಿಕೊಂಡರೆ ಬ್ಯಾಂಕ್ ವ್ಯವಹಾರಕ್ಕೆ ತೊಂದರೆಯಾಗಲಿದೆ. ಹೀಗಾಗಿ ಸ್ಥಳೀಯ ಭಾಷಿಕರಿಗೆ ಆದ್ಯತೆ ನೀಡುವುದರ ಜೊತೆಗೆ ಹಿರಿಯ ಅಧಿಕಾರಿಗಳು ಆಗಾಗ್ಗೆ ಶಾಖೆಗಳಿಗೆ ಭೇಟಿ ನೀಡುವ ಮೂಲಕ ಸ್ಥಳೀಯ ಭಾಷೆಯಲ್ಲಿ ವ್ಯವಹಾರ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.