ಸಾರಿಗೆ ವಲಯ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ವ್ಯವಹಾರಗಳ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇಕಡ 13-14 ರಿಂದ ಒಂದೇ ಅಂಕೆಗೆ ಇಳಿಸಲು ಪ್ರಯತ್ನಿಸುವ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅನಾವರಣಗೊಳಿಸಿದ್ದಾರೆ.
ನೀತಿಯು ಕೊನೆಯ ಮೈಲಿ ವಿತರಣೆಯನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ. ವ್ಯವಹಾರಗಳಿಗೆ ಸಮಯ ಮತ್ತು ಹಣ ಉಳಿಸಲು ಸಹಾಯ ಮಾಡುತ್ತದೆ. ಹೊಸ ನೀತಿಯು ಲಾಜಿಸ್ಟಿಕ್ಸ್ ವಲಯದ ಸವಾಲುಗಳನ್ನು ಪರಿಹರಿಸುತ್ತದೆ, ಇದು ಮೂಲಸೌಕರ್ಯ ವೃದ್ಧಿ ಯೋಜನೆಯೊಂದಿಗೆ ಪಿಎಂ ಗತಿಶಕ್ತಿ ಅಂತರವನ್ನು ಪರಿಹರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಉತ್ಪನ್ನಗಳು ವಿಶ್ವ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು, ದೇಶವು ತನ್ನ ಬೆಂಬಲ ವ್ಯವಸ್ಥೆಯನ್ನು ಬಲಪಡಿಸಬೇಕು. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಬೆಂಬಲ ವ್ಯವಸ್ಥೆಯನ್ನು ಆಧುನಿಕವಾಗಿಸಲು ಸಹಾಯ ಮಾಡುತ್ತದೆ. ಭಾರತವು ಪ್ರಜಾಸತ್ತಾತ್ಮಕ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಜಾಗತಿಕ ತಜ್ಞರು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು.
ಲಾಜಿಸ್ಟಿಕ್ಸ್ ವಲಯವನ್ನು ಬಲಪಡಿಸಲು ಸರ್ಕಾರ ತಂತ್ರಜ್ಞಾನ ಬಳಸುತ್ತಿದೆ. ಕಸ್ಟಮ್ಸ್ ಮತ್ತು ಇ-ವೇ ಬಿಲ್ಗಳಲ್ಲಿ ಮುಖರಹಿತ ಮೌಲ್ಯಮಾಪನ ಪ್ರಾರಂಭವಾಗಿದೆ ಮತ್ತು ಫಾಸ್ಟ್ ಟ್ಯಾಗ್ ಲಾಜಿಸ್ಟಿಕ್ಸ್ ವಲಯಕ್ಕೆ ದಕ್ಷತೆಯನ್ನು ತರುತ್ತಿದೆ. ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಕಂಟೈನರ್ ಹಡಗುಗಳ ತಿರುಗುವಿಕೆಯ ಸಮಯವನ್ನು ಹಿಂದಿನ 44 ಗಂಟೆಗಳಿಂದ 26 ಗಂಟೆಗೆ ಕಡಿತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಸರಕು ಸಾಗಣೆ ಕಾರಿಡಾರ್ಗಳನ್ನು ಸಂಪರ್ಕಿಸುವ ಸಾಗರಮಾಲಾ ಯೋಜನೆಯು ಲಾಜಿಸ್ಟಿಕ್ಸ್ ಸಂಪರ್ಕ ಮತ್ತು ವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಸುಧಾರಿಸಲು ಪ್ರಾರಂಭಿಸಿದೆ. ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು.