ಸೂರತ್: ಇಲ್ಲಿನ ದೇವಾದ್-ಕುಂಭಾರಿಯಾ ರಸ್ತೆಯ ಬಾಳೆ ತೋಟದಲ್ಲಿ ಸೆ.11 ರ ರಾತ್ರಿ 27 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ವಲಸೆ ಕಾರ್ಮಿಕರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿಗಳ ಪೈಕಿ ಮೂವರನ್ನು ಬಾಂಬೆ ಕ್ಲಾತ್ ಮಾರ್ಕೆಟ್ ಬಳಿಯ ರಾಜೀವನಗರ ಕೊಳೆಗೇರಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ ಮೂವರು ಕೆಲಸಗಾರರು ಸರ್ದಾರ್ ಮಾರುಕಟ್ಟೆಯಲ್ಲಿ ತರಕಾರಿ ಚೀಲಗಳನ್ನು ಇಡುವ ಕಾರ್ಮಿಕರು. ಮಹಿಳೆ ಮತ್ತು ಆಕೆಯ ಪುರುಷ ಸ್ನೇಹಿತ ನೀಡಿದ ವಿವರಣೆಯ ಆಧಾರದ ಮೇಲೆ ಸಿದ್ಧಪಡಿಸಿದ ರೇಖಾಚಿತ್ರಗಳನ್ನು ಪ್ರಸಾರ ಮಾಡಿದ ನಂತರ ಅವರನ್ನು ಬಂಧಿಸಲಾಗಿದೆ.
ಪುರುಷರ ರೇಖಾಚಿತ್ರಗಳನ್ನು ಪ್ರಸಾರ ಮಾಡಿದ್ದು, ಒಬ್ಬ ವ್ಯಕ್ತಿ ಸ್ಕೆಚ್ ನಲ್ಲಿರುವ ವ್ಯಕ್ತಿಯನ್ನು ಹೋಲುತ್ತಾನೆ ಮತ್ತು ರಾಜೀವ್ ನಗರ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಬಂದಿದೆ. ಪೊಲೀಸರು ಆ ವ್ಯಕ್ತಿಯ ಮೇಲೆ ನಿಗಾ ಇರಿಸಿ ಬಂಧಿಸಿದ್ದು, ಆತ ಸರಿಯಾದ ಮಾಹಿತಿ ನೀಡಲಿಲ್ಲ. ವ್ಯಕ್ತಿಯ ಚಿತ್ರವನ್ನು ತೆಗೆದುಕೊಂಡು ಮಹಿಳೆಯ ಗೆಳೆಯನಿಗೆ ತೋರಿಸಿದಾಗ ಅವರು ತಕ್ಷಣ ಅವನನ್ನು ಗುರುತಿಸಿದ್ದಾರೆ.
ನಂತರ ತನಿಖೆ ಕೈಗೊಂಡು ತಮ್ಮದೇ ಭಾಷೆಯಲ್ಲಿ ಪೊಲೀಸರು ವಿಚಾರಿಸಿದಾಗ ಆರೋಪಿ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಪೊಲೀಸರು ಮೂವರನ್ನು ಬಂಧಿಸಿದ್ದು, ಪ್ರಕರಣದ ನಾಲ್ಕನೇ ಆರೋಪಿ ದೀಪಕ್ ಯಾದವ್ ಪರಾರಿಯಾಗಿದ್ದಾನೆ.
ಸೆಪ್ಟೆಂಬರ್ 11 ರಂದು ಆರೋಪಿಗಳು ದೇವಾದ್-ಕುಂಭಾರಿಯಾ ರಸ್ತೆಯಲ್ಲಿ ದೂರದವರೆಗೆ ಹೋಗಿದ್ದರು, ಮಹಿಳೆ ಮತ್ತು ಆಕೆಯ ಸ್ನೇಹಿತ ಪ್ರತ್ಯೇಕ ಸ್ಥಳದಲ್ಲಿ ಕುಳಿತಿರುವುದನ್ನು ನೋಡಿದ್ದು, ಪರಿಸ್ಥಿತಿಯ ಲಾಭ ಪಡೆಯಲು ನಿರ್ಧರಿಸಿದ್ದಾರೆ. ಅವರು ಜೋಡಿಯ ಬಳಿ ಹೋಗಿದ್ದು, ಟವೆಲ್ ನಿಂದ ವ್ಯಕ್ತಿಯ ಕುತ್ತಿಗೆ ಬಿಗಿದು ಹಲ್ಲೆ ಮಾಡಿ ಕಟ್ಟಿ ಹಾಕಿದ್ದಾರೆ. ನಂತರ ಮಹಿಳೆಯನ್ನು ಬಾಳೆ ತೋಟಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಬಳಿಕ ಅವರ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಮಧ್ಯಪ್ರದೇಶ ಮೂಲದ ಮಹಿಳೆ ಕಳೆದ ನಾಲ್ಕು ತಿಂಗಳಿಂದ ಜರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪುನಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.