ಬೆಂಗಳೂರು: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗಳು ನೋವು ತಂದಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ವಿಮ್ಸ್ ನಲ್ಲಿ ರೋಗಿಗಳ ಸಾವಿಗೆ ಆರೋಗ್ಯ ಸಚಿವರೇ ನೇರ ಹೊಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆ ಸರಿಯಲ್ಲ. ಸಾವು ಸಾವೇ ಅದರ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತೇನೆ. ನನ್ನ ಗಮನಕ್ಕೆ ಬಂದ ಕೂಡಲೇ ತನಿಖೆಗೆ ಸೂಚಿಸಿದ್ದೇನೆ. ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ಘೋಷಿಸಿದ್ದಾರೆ. ಆದರೂ ಕೂಡ ಸಿದ್ದರಾಮಯ್ಯ ಅನಗತ್ಯ ಆರೋಪ ಮಾಡುತ್ತಿದ್ದು, ಅವರ ಹೇಳಿಕೆಗಳಿಂದ ಬೇಸರವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಈ ಹಿಂದೆ ಸರ್ಕಾರ ನಡೆಸಿದವರು. ಅಂತವರು ನೀಡಿರುವ ಹೇಳಿಕೆ ನೋವಾಗಿದೆ. ಇದು ಒಬ್ಬ ನಾಯಕರಾಗಿ ಹೇಳುವ ಮಾತಲ್ಲ. 2017ರಲ್ಲಿ ಸಿದ್ದರಾಮಯ್ಯ ಕೆಪಿಎಂಇ ಕಾಯ್ದೆ ತರಲು ಹೊರಟಿದ್ದರು. 3 ದಿನ ಡಿಸ್ಪೆನ್ಸರಿ ಬಂದ್ ಮಾಡಿದ್ದಾಗ 70-80 ಜನರ ಸಾವಾಗಿತ್ತು. ಹಾಗಾದರೆ ಇದಕ್ಕೆ ಸಿದ್ದರಾಮಯ್ಯ ಜವಾಬ್ದಾರಿ ಅಂತಾ ನಾನು ಹೇಳಬಹುದಾ ? ಈ ಬಗ್ಗೆ ಸ್ಪೀಕರ್ ಅನುಮತಿ ಕೊಟ್ಟರೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.