ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಆನೆಯೊಂದು ಅಡ್ಡಬಂದು ಗಾಬರಿ ಸೃಷ್ಟಿಸಿದ ಪ್ರಸಂಗ ನಡೆದಿದೆ.
ಅವರು ಸಾಗುತ್ತಿದ್ದ ದಾರಿಯಲ್ಲಿ ಏಕಾಏಕಿ ಆನೆಯೊಂದು ಕಾರಿನ ಮುಂದೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಬೆಂಗಾವಲು ವಾಹನ ನಿಲ್ಲಿಸಿ ಪ್ರಾಣಾಪಾಯದಿಂದ ಪಾರಾಗಲು ಪ್ರಯತ್ನಿಸಲಾಯಿತು. ಕೊನೆಗೆ ಆನೆಯು ಅವರನ್ನು ಬೆನ್ನಟ್ಟಲು ಪ್ರಾರಂಭಿಸಿತು.
ಘಟನೆಯ ವೀಡಿಯೊದಲ್ಲಿ, ರಾವತ್ ತಮ್ಮನ್ನು ರಕ್ಷಿಸಿಕೊಳ್ಳಲು ಬಂಡೆಯನ್ನು ಹತ್ತುತ್ತಿರುವುದು ಕಂಡುಬಂದಿದೆ.
ರಾವತ್ ಅವರು ಬುಧವಾರ ಸಂಜೆ 5 ರಿಂದ 6 ಗಂಟೆಯ ನಡುವೆ ಪೌರಿಯಿಂದ ಕೋಟ್ದ್ವಾರ-ದುಗಡ್ಡಾ ರಸ್ತೆಯ ಮೂಲಕ ಕೋಟ್ದ್ವಾರಕ್ಕೆ ಬರುತ್ತಿದ್ದಾಗ ಆನೆ ಇದ್ದಕ್ಕಿದ್ದಂತೆ ಕಾಡಿನಿಂದ ಹೊರಬಂದು ಅವರ ಬೆಂಗಾವಲು ಪಡೆಯನ್ನು ತಡೆದಿದೆ.
ಮಾಜಿ ಸಿಎಂ ತಮ್ಮ ವಾಹನದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡರು, ಆದರೆ ಆನೆ ಅವರ ವಾಹನದತ್ತ ಬರಲು ಪ್ರಾರಂಭಿಸಿದಾಗ, ಮಾಜಿ ಸಿಎಂ ಸೇರಿದಂತೆ ಜನರೆಲ್ಲರೂ ತಮ್ಮ ವಾಹನವನ್ನು ಬಿಟ್ಟು ಪರ್ವತವನ್ನು ಹತ್ತಬೇಕಾಯಿತು. ರಾಜ್ಯವನ್ನಾಳಿದ ವ್ಯಕ್ತಿ ಹಾಗೂ ಹೀಗೂ ಹೇಗೋ ಬೆಟ್ಟ ಹತ್ತಿ ಪ್ರಾಣ ಉಳಿಸಿಕೊಂಡರು.
ಸುಮಾರು ಅರ್ಧ ಗಂಟೆ ಅಲ್ಲಿಯೇ ಉಳಿಯಬೇಕಾಯಿತು. ಈ ವೇಳೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಮಾಹಿತಿ ಪಡೆದ ತಕ್ಷಣ ಅಲ್ಲಿಗೆ ಧಾವಿಸಿದ ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಓಡಿಸಿದರು.
ದುಗಡ್ಡ ರೇಂಜ್ ಆಫೀಸರ್ ಪ್ರದೀಪ್ ಡೊಬ್ರಿಯಾಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೊಟ್ದ್ವಾರ ಮತ್ತು ದುಗಡ್ಡ ನಡುವಿನ ಪ್ರದೇಶವು ಶಿವಾಲಿಕ್ ಆನೆ ಕಾರಿಡಾರ್ ಪ್ರದೇಶದಲ್ಲಿ ಬರುವುದರಿಂದ ಆನೆಗಳು ಆಗಾಗ್ಗೆ ಹೆದ್ದಾರಿಯಲ್ಲಿ ಬರುತ್ತವೆ ಎಂದಿದ್ದಾರೆ.