ಪ್ರಧಾನಿ ನರೇಂದ್ರ ಮೋದಿಯವರು ಇಂದು 72 ನೇ ಜನ್ಮ ದಿನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಅವರಿಗೆ ಉಡುಗೊರೆಯಾಗಿ ಬಂದ 1,200 ಕ್ಕೂ ಅಧಿಕ ಸ್ಮರಣಿಕೆಗಳನ್ನು ಹರಾಜು ಮಾಡಲಾಗುತ್ತಿದೆ. ಹರಾಜಿನಿಂದ ಸಂಗ್ರಹವಾದ ಆದಾಯವನ್ನು ʼನಮಾಮಿ ಗಂಗಾʼ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ.
pmmementos.gov.in ವೆಬ್ ಪೋರ್ಟಲ್ ಮೂಲಕ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಸಪ್ಟೆಂಬರ್ 17ಕ್ಕೆ ಆರಂಭವಾಗಲಿರುವ ಈ ಪ್ರಕ್ರಿಯೆ ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳಲಿದ್ದು, ಈ ಸಂದರ್ಭದಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ, ಜನಸಾಮಾನ್ಯರು ಮತ್ತು ವಿವಿಧ ಗಣ್ಯರು ನೀಡಿರುವ ವಿಶೇಷ ಉಡುಗೊರೆಗಳನ್ನು ಹರಾಜು ಮಾಡಲಾಗುವುದು.
ಉಡುಗೊರೆಗಳ ಮೂಲ ಬೆಲೆ 100 ರೂಪಾಯಿಯಿಂದ ಪ್ರಾರಂಭವಾಗಿ 10 ಲಕ್ಷ ರೂಪಾಯಿವರೆಗೂ ಇದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಡುಗೊರೆಯಾಗಿ ನೀಡಿದ ರಾಣಿ ಕಮಲಾಪತಿ ಪ್ರತಿಮೆ, ಹನುಮಾನ್ ವಿಗ್ರಹ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉಡುಗೊರೆಯಾಗಿ ನೀಡಿದ ಸೂರ್ಯ ವರ್ಣಚಿತ್ರ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಉಡುಗೊರೆಯಾಗಿ ನೀಡಿದ ‘ತ್ರಿಶೂಲ್’ ಸಹ ಹರಾಜಾಗಲಿವೆ.