ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅದರಲ್ಲಿಯೂ ವಿಧೇಯಕಗಳನ್ನು ಚರ್ಚಿಸದೇ ಅಂಗೀಕರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ವಿಧೇಯಕಗಳನ್ನು ಚರ್ಚಿಸದೇ ಅಂಗೀಕಾರ ಮಾಡಲಾಗುತ್ತಿದೆ. ಈ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ವಿಧೇಯಕಗಳ ಬಗ್ಗೆ ಗಂಭೀರವಾಗಿ ಚರ್ಚೆಯಾಗಬೇಕು. ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಆದರೆ ಉತ್ತರವನ್ನೇ ಕೊಡದೇ ಗೊಂದಲ ಮೂಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಈ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಗೊಂದಲದಲ್ಲಿದೆ. ಇದು ಧಾರ್ಮಿಕ ಹಕ್ಕು ಕಸಿಯುವ ವಿಧೇಯಕ. ಪರಿಚ್ಛೇದ 25, 28ರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಇದರಲ್ಲಿದೆ. ಪ್ರತಿಯೊಬ್ಬರಿಗೂ ಧರ್ಮದ ಬಗ್ಗೆ ಸ್ವಾತಂತ್ರ್ಯವಿದೆ. ವಿಧೇಯಕದ ಬಗ್ಗೆ ಇರುವ ಗೊಂದಲಗಳಿಗೆ ಸರ್ಕಾರ ಉತ್ತರಿಸುತ್ತಿಲ್ಲ ಎಂದು ಕಿಡಿಕಾರಿದರು.