ಲಖ್ನೋ: ಭಾರಿ ಮಳೆಯಿಂದ ಮನೆ ಕುಸಿದು 9 ಜನ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಖ್ನೋದ ಹಜರತ್ ಗಂಜ್ ನಲ್ಲಿ ನಡೆದಿದೆ. ಇಬ್ಬರು ಮಕ್ಕಳು ಸೇರಿದಂತೆ 9 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬದವರಿಗೆ ಉತ್ತರ ಪ್ರದೇಶ ಸಿಎಂ ಪರಿಹಾರ ಘೋಷಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಗೆ ಲಕ್ನೋದಲ್ಲಿ ಗೋಡೆ ಕುಸಿದು 9 ಜನ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತಪಟ್ಟವರಿಗೆ 4 ಲಕ್ಷ ರೂ. ಮತ್ತು ಗಾಯಾಳುಗಳ ಚಿಕಿತ್ಸೆಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಕೆಲವು ಕಾರ್ಮಿಕರು ದಿಲ್ಕುಶಾ ಪ್ರದೇಶದಲ್ಲಿನ ಆರ್ಮಿ ಎನ್ ಕ್ಲೇವ್ ನ ಹೊರಗೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ರಾತ್ರಿಯ ಭಾರೀ ಮಳೆಯಿಂದಾಗಿ, ಆರ್ಮಿ ಎನ್ ಕ್ಲೇವ್ ಗಡಿ ಗೋಡೆ ಕುಸಿದಿದೆ. 9 ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಯಿತು. ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಜಂಟಿ ಪೊಲೀಸ್ ಕಮಿಷನರ್(ಕಾನೂನು ಮತ್ತು ಸುವ್ಯವಸ್ಥೆ) ಪಿಯೂಷ್ ಮೊರ್ಡಿಯಾ ತಿಳಿಸಿದರು.
ಲಖ್ನೋದಲ್ಲಿ ಇಡೀ ತಿಂಗಳಲ್ಲಿ ಬರುವ ಮಳೆ ಒಂದೇ ದಿನದಲ್ಲಿ ಸುರಿದಿದೆ. ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 155.2 ಮಿ.ಮೀ ಮಳೆ ದಾಖಲಾಗಿದೆ. ಇಡೀ ಸೆಪ್ಟೆಂಬರ್ ತಿಂಗಳಿಗೆ ಲಖ್ನೋ ಸಾಮಾನ್ಯವಾಗಿ ಪಡೆಯುವ ಸರಾಸರಿ ಮಳೆ 197 ಮಿ.ಮೀ. ಆಗಿದ್ದು ಒಂದೇ ದಿನ ಬಂದ ಭಾರಿ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಜಲಾವೃತವಾಗಿದೆ.