ಮೊಬೈಲ್ ಕಳವು ಮಾಡಲು ಕಳ್ಳರು ಹಲವು ತಂತ್ರಗಳನ್ನು ಅನುಸರಿಸುತ್ತಾರೆ. ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಎಗರಿಸುವುದು ಒಂದು ತಂತ್ರವಾದರೆ, ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವಾಗ ಬೈಕ್ ನಲ್ಲಿ ಬಂದು ಕಿತ್ತುಕೊಂಡು ಪರಾರಿಯಾಗುವುದು ಮತ್ತೊಂದು ವಿಧಾನ.
ಅದೇ ರೀತಿ ರೈಲಿನಲ್ಲಿ ಪ್ರಯಾಣಿಸುವಾಗ ಫ್ಲಾಟ್ ಫಾರ್ಮ್ ನಿಂದ ಕಳ್ಳ ಮೊಬೈಲ್ ಕಿತ್ತುಕೊಂಡರೆ ರೈಲು ಸಂಚಾರ ಆರಂಭವಾದ ಸಂದರ್ಭದಲ್ಲಿ ಪ್ರಯಾಣಿಕ ಏನೂ ಮಾಡಲು ಸಾಧ್ಯವಿಲ್ಲದಂತಾಗುತ್ತದೆ. ಈ ರೀತಿ ಮೊಬೈಲ್ ಕಳವು ಮಾಡಲು ಮುಂದಾದ ಕಳ್ಳನೊಬ್ಬ ಇನ್ನಿಲ್ಲದ ಫಜೀತಿ ಅನುಭವಿಸಿದ್ದಾನೆ.
ಇಂತಹದೊಂದು ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 14ರಂದು ಬೇಗುಸರಾಯ್ ನಿಂದ ಖಗಾರಿಯಾಗೆ ರೈಲು ಹೋಗುತ್ತಿದ್ದ ವೇಳೆ ಸಾಹೇಬ್ ಕಮಲ್ ನಿಲ್ದಾಣದಲ್ಲಿ ರೈಲು ನಿಂತಿದೆ.
ಇದೇ ಸಂದರ್ಭ ಸಾಧಿಸಿದ ಕಳ್ಳನೊಬ್ಬ ಪ್ಲಾಟ್ ಫಾರ್ಮ್ ನಿಂದಲೇ ಕಿಟಕಿಯೊಳಗೆ ಕೈ ಹಾಕಿ ಪ್ರಯಾಣಿಕರೊಬ್ಬರ ಮೊಬೈಲ್ ಕಿತ್ತುಕೊಂಡಿದ್ದು, ಆದರೆ ಆ ಪ್ರಯಾಣಿಕ ಕಳ್ಳನ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.
ಇದರಿಂದಾಗಿ ಆತ ಪರಾರಿಯಾಗಲು ಸಾಧ್ಯವಾಗದೆ ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುತ್ತಿದ್ದು, ಆದರೆ ಪ್ರಯಾಣಿಕ 10 ಕಿ.ಮೀ ವರೆಗೆ ಆತನ ಕೈ ಬಿಟ್ಟಿಲ್ಲ. ಆನಂತರ ಕೈಬಿಡುತ್ತಿದ್ದಂತೆಯೇ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ. ಇದರ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.