ಬೆಂಗಳೂರು: ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ರೈತರ ಮನೆಗಳಿಗೆ ನಿಯಮಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕೌಜಲಗಿ ಮಹಾಂತೇಶ ಶಿವಾನಂದ್ ಅವರು ವಿಷಯ ಪ್ರಸ್ತಾಪಿಸಿ, ಕಳೆದ ಒಂದು ತಿಂಗಳಿನಿಂದ ಜಮೀನುಗಳಲ್ಲಿ ವಾಸ ಮಾಡುತ್ತಿರುವ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕೃಷಿ ಪಂಪ್ ಸೆಟ್ ಗಳಿಗೆ ನೀಡುತ್ತಿರುವಂತೆ 6 -7 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸಂಜೆ 6ರಿಂದ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಕಡಿತ ಮಾಡುವುದರಿಂದ ಮತ್ತು ಅಗತ್ಯವಿಲ್ಲದ ವೇಳೆಯಲ್ಲಿ ವಿದ್ಯುತ್ ನೀಡುತ್ತಿರುವುದರಿಂದ ಮಕ್ಕಳು ಓದಲು ಸಮಸ್ಯೆಯಾಗಿದೆ. ಹೊಲಗಳಲ್ಲಿ ವಿಷಜಂತುಗಳ ಕಾಟ ಇರುವುದರಿಂದ ವಿದ್ಯುತ್ ಪೂರೈಕೆ ಮಾಡಬೇಕು, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದು, ಕಾಂಗ್ರೆಸ್ ಸದಸ್ಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಜಯ್ ಸಿಂಗ್ ಹಾಗೂ ಬಿಜೆಪಿಯ ಕೆಲವು ಸದಸ್ಯರು ಈ ಬಗ್ಗೆ ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿದ ಸಚಿವ ಸುನಿಲ್ ಕುಮಾರ್ ಅವರು, ಹೆಸ್ಕಾಂ ಮತ್ತು ಜೆಸ್ಕಾಂ ವ್ಯಾಪ್ತಿಯ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡಿರುವ 1,29,067 ರೈತರ ಮನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕೂಡಲೇ ಕ್ರಮ ಕೈಗೊಂಡು ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.