ರಾಯಚೂರು: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ರಾಯಚೂರು ಜಿಲ್ಲೆಯಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಲಡ್ಡು ನೀಡಲಾಗುವುದು. ರಾಜ್ಯದಲ್ಲಿಯೇ ಮೊದಲ ಬಾರಿಗೆ ರಾಯಚೂರು ಜಿಲ್ಲಾಡಳಿತ ಅಪೌಷ್ಟಿಕ ಮಕ್ಕಳಿಗೆ ಸಿರಿಧಾನ್ಯದ ಲಡ್ಡು ವಿತರಿಸಲು ಪ್ರಯೋಗ ಕೈಗೊಂಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಮುಂದಾಗಿದೆ.
ಪೌಷ್ಟಿಕ ಆಹಾರದ ಜೊತೆಗೆ ಸಿರಿಧಾನ್ಯದ ಲಡ್ಡು ವಿತರಿಸಲಿದ್ದು, ಮುಂದಿನ ಒಂದು ವರ್ಷ ಯೋಜನೆ ಜಾರಿಯಲ್ಲಿರಲಿದೆ. ಯೋಜನೆಗಾಗಿ ಸಿ.ಎಸ್.ಆರ್. ನಿಧಿ ಬಳಸಿಕೊಳ್ಳಲಾಗುವುದು. ಹಿಂದುಳಿದ ಪ್ರದೇಶವಾದ ರಾಯಚೂರು ಜಿಲ್ಲೆಯಲ್ಲಿ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಅಪೌಷ್ಟಿಕ ಮಕ್ಕಳಿಗೆ ಸಿರಿಧಾನ್ಯದಿಂದ ತಯಾರಿಸಿದ ಲಡ್ಡು ವಿತರಿಸಲಾಗುವುದು. 35,000 ಮಕ್ಕಳು ತೀವ್ರ ಮತ್ತು ಸಾಮಾನ್ಯ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರೆಲ್ಲರಿಗೂ ಸಿರಿಧಾನ್ಯದ ಲಡ್ಡು ನೀಡಲಾಗುವುದು ಎಂದು ಹೇಳಲಾಗಿದೆ.