ಬೆಂಗಳೂರು: ರಾಜ್ಯದ ಹೆದ್ದಾರಿಗಳಲ್ಲಿ ಅವೈಜ್ಞಾನಿಕ, ಕಾನೂನುಬಾಹಿರ ಅನಧಿಕೃತ ಟೋಲ್ ಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ.
ವಿಧಾನಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಸುರತ್ಕಲ್ ಬಳಿ ಅನಧಿಕೃತ ಟೋಲ್ ಸಂಗ್ರಹದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವರು, ಕಾನೂನು ಬಾಹಿರ ಟೋಲ್ ಸಂಗ್ರಹ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದು, ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ಟೋಲ್ ಗಳನ್ನು ತೆರವುಗೊಳಿಸಲಾಗುತ್ತದೆ. 60 ಕಿಲೋಮೀಟರ್ ಗೆ ಒಂದಕ್ಕಿಂತ ಹೆಚ್ಚು ಟೋಲ್ ಗಳು ಇರುವಂತಿಲ್ಲ. ಸುರತ್ಕಲ್ ಬಳಿ ಹೆದ್ದಾರಿ ನಿರ್ಮಿಸಿರುವ ಎರಡು ಕಂಪನಿಗಳು ಟೋಲ್ ಸಂಗ್ರಹಕ್ಕೆ ಇಳಿದಿವೆ. ಇದರಿಂದ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಈ ಟೋಲ್ ಗೇಟ್ ರದ್ದುಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದು, ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎಂದು ಸಚಿವರು ಹೇಳಿದ್ದಾರೆ.