ಕೋಲಾರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹಾರೋಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮೂರು ವರ್ಷದ ಮಗುವನ್ನು ಶೌಚಾಲಯದಲ್ಲಿಯೇ ಬಿಟ್ಟು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಬುಧವಾರ ಸಂಜೆ ಘಟನೆ ನಡೆದಿದೆ.
ಅಂಗನವಾಡಿ ಸಮಯ ಮುಗಿದ ವೇಳೆ ಮಗು ಶೌಚಾಲಯಕ್ಕೆ ಹೋಗಿದ್ದು, ಅಲ್ಲೇ ನಿದ್ದೆಗೆ ಜಾರಿದೆ. ಮನೆಗೆ ಮಗು ಬರದ ಕಾರಣ ಪೋಷಕರು ಹುಡುಕಾಟ ನಡೆಸಿದ್ದಾರೆ. ಅಂಗನವಾಡಿ ಕೇಂದ್ರದೊಳಗೆ ಪರಿಶೀಲಿಸಿದಾಗ ಶೌಚಾಲಯದಲ್ಲಿ ಮಗು ಇರುವುದು ಕಂಡು ಬಂದಿದೆ. ಅಂಗನವಾಡಿ ಬಿಡುವ ವೇಳೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ಮಗು ಅಲ್ಲೇ ನಿದ್ದೆಗೆ ಜಾರಿದ್ದು, ತಾಯಿ ಕೂಗಿಗೆ ಎಚ್ಚರಗೊಂಡು ಸ್ಪಂದಿಸಿದೆ. ಮಗುವಿಗೆ ಯಾವುದೇ ತೊಂದರೆಯಾಗಿಲ್ಲ.
ಎಲ್ಲಾ ಮಕ್ಕಳು ಅಂಗನವಾಡಿ ಅಕ್ಕಪಕ್ಕದ ನಿವಾಸಿಗಳಾಗಿರುವುದರಿಂದ ಮಗು ಮನೆಗೆ ಹೋಗಿರಬಹುದು ಎಂದು ಅಂಗನವಾಡಿ ಸಹಾಯಕಿ ಬೀಗ ಹಾಕಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ತಿಳಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರ್ತವ್ಯ ಲೋಪಸಗಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಸೇವೆಯಿಂದ ವಜಾಗೊಳಿಸಲು ಶಿಫಾರಸು ಮಾಡಿದ್ದಾರೆ.