ಇಂಟರ್ನೆಟ್ ನಲ್ಲಿ ವಿಭಿನ್ನ, ಮನೋರಂಜನೆಯ, ಹೃದಯಸ್ಪರ್ಶಿ ಮುಂತಾದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಕೊಜಾಚಾ ಲೋಪಾನ್‌ನ ವಿಮೋಚನೆಯ ನಂತರ ಉಕ್ರೇನಿಯನ್ ಸೈನಿಕ ಮನೆಗೆ ಹಿಂದಿರುಗಿರುವ ಹೃದಯಸ್ಪರ್ಶಿ ದೃಶ್ಯ ವೈರಲ್ ಆಗಿದೆ.
ಸೈನಿಕ ಪುತ್ರ ಮನೆಗೆ ಮರಳಿದ್ದನ್ನು ಕಂಡ ತಾಯಿ ಭಾವುಕರಾದ್ರು. ಓಡಿ ಹೋಗಿ ಮಗನನ್ನು ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ್ದಾರೆ. ಈ ವಿಡಿಯೋವನ್ನು ಎಸ್ಟೋನಿಯಾದ ಉಕ್ರೇನ್ ರಾಯಭಾರಿ ಮರಿಯಾನಾ ಬೆಟ್ಸಾ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ 12 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಸೈನಿಕ ವಾಹನದಲ್ಲಿ ಬರುತ್ತಿದ್ದಂತೆ ಅತ್ತ ಕಡೆಗೆ ತಾಯಿ ಓಡಿದ್ದಾರೆ. ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಅವರು ತನ್ನ ಮಗನನ್ನು ಅಪ್ಪಿಕೊಂಡಿದ್ದಾರೆ. ಮಗನನ್ನು ನೋಡಿದ ಕೂಡಲೇ ಮನಸ್ಸು ಹಗುರವಾಗಿ ಸಮಾಧಾನ ಹೊಂದಿದ್ರು. ಆಕೆಯ ಮುಖದಲ್ಲಿ ಸಂತಸ, ನೆಮ್ಮದಿ ಎದ್ದು ಕಾಣುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ, ಇದು ಸೈನಿಕನ ತಾಯಿಯ ಆನಂದಭಾಷ್ಪ. ಖಾರ್ಕಿವ್ ಪ್ರದೇಶದಲ್ಲಿ ಕೊಜಾಚಾ ಲೋಪಾನ್‌ನ ವಿಮೋಚನೆಯ ನಂತರ ಉಕ್ರೇನಿಯನ್ ರಕ್ಷಕ ತನ್ನ ತಾಯಿಯನ್ನು ಭೇಟಿಯಾಗುತ್ತಾನೆ ಎಂದು ಶೀರ್ಷಿಕೆ ನೀಡಲಾಗಿದೆ.
ಯೋಧ ತನ್ನ ಮನೆಗೆ ಆಗಮಿಸಿ ತಾಯಿಯನ್ನು ಅಪ್ಪಿಕೊಂಡಿರುವ ವಿಡಿಯೋ ನೋಡಿದ ನೆಟ್ಟಿಗರು ಕೂಡ ಸಂಭ್ರಮಪಟ್ಟರು. ಕಳೆದ ಕೆಲವು ದಿನಗಳಲ್ಲಿ ನಾವು ನೋಡಿದ ವಿಮೋಚನೆಗೊಂಡ ಪಟ್ಟಣಗಳ ಎಲ್ಲಾ ದೃಶ್ಯಗಳಿಗಿಂತ ಇದು ಅತ್ಯುತ್ತಮ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್‌ನ ಸಶಸ್ತ್ರ ಪಡೆಗಳು ಸೆಪ್ಟೆಂಬರ್ 11 ರಂದು ಖಾರ್ಕಿವ್ ಒಬ್ಲಾಸ್ಟ್‌ನ ಡೆರ್ಹಾಚಿ ಹ್ರೊಮಾಡಾದಲ್ಲಿ ಕೊಜಾಚಾ ಲೋಪಾನ್ ಮತ್ತು ಟೋಕರಿವ್ಕಾ ಗ್ರಾಮಗಳನ್ನು ವಿಮೋಚನೆಗೊಳಿಸಿದವು.