1,500 ವರ್ಷಗಳ ಇತಿಹಾಸವಿರುವ ದೇವಾಲಯ, ದೇವಾಲಯಕ್ಕೆ ಸೇರಿದ 400 ಎಕರೆ ಜಾಗ, 100ಕ್ಕೂ ಹೆಚ್ಚು ಹಿಂದೂ ಕುಟುಂಬಗಳ ಆಸ್ತಿ, ಮನೆ ಹೀಗೆ ಪ್ರತಿಯೊಂದು ತಮಿಳುನಾಡು ವಕ್ಫ್ ಬೋರ್ಡ್ ಹೆಸರಿನಲ್ಲಿದ್ದು, ಈ ವಿಚಾರ ತಿಳಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇದರ ಪರಿಣಾಮ ಈಗ ಈ ಗ್ರಾಮದ ಜನರು ತಮ್ಮ ಆಸ್ತಿಯನ್ನ ತಾವೇ ಮಾರೋದಕ್ಕೆ ಹರಸಾಹಸ ಪಡುವ ಹಾಗಾಗಿದೆ.
ತಮಿಳುನಾಡಿನ ಕಾವೇರಿ ನದಿಯ ದಡದಲ್ಲಿರುವ ತಿರುಚೆಂತುರೈ ಅನ್ನುವ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಹಿಂದೂಗಳ ಸಂಖ್ಯೆಯೇ ಹೆಚ್ಚಾಗಿದ್ದು, ಈ ಗ್ರಾಮವನ್ನ ವಕ್ಫ್ ಆಸ್ತಿ ಎಂದು ದಾಖಲೆಗಳಲ್ಲಿ ಇದೆ.
ವರದಿಗಳ ಪ್ರಕಾರ, ಎನ್. ರಾಜಗೋಪಾಲ್ ಎಂಬುವವರು ತಮ್ಮ ಮಗಳ ವಿವಾಹ ಸಲುವಾಗಿ ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂತುರೈ ಗ್ರಾಮದಲ್ಲಿದ್ದ 1 ಎಕರೆ 2 ಸೆಂಟ್ ಕೃಷಿ ಭೂಮಿಯನ್ನು ರಾಜೇಶ್ವರಿ ಎಂಬುವವರಿಗೆ ಮಾರಾಟ ಮಾಡಲು ನಿರ್ಧರಿಸಿದ್ದರು. ಆದರೆ ಆಸ್ತಿ ಮಾರಾಟ ಮಾಡಲು ರಿಜಿಸ್ಟ್ರಾರ್ ಕಚೇರಿ ತಲುಪಿದ್ದ ರಾಜಗೋಪಾಲ್ ಅವರಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರಗಿತ್ತು.
ಅವರಿಗೆ ಸೇರಿದ್ದ 1.2 ಎಕರೆ ಜಮೀನು ತಮಿಳುನಾಡಿನ ವಕ್ಫ್ ಬೋರ್ಡಿಗೆ ಸೇರಿದ್ದು, ಅದನ್ನು ಮಾರಲು ಅವರು ವಕ್ಫ್ ಬೋರ್ಡ್ ನ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ಎಂದು ಅಲ್ಲಿ ತಿಳಿಸಲಾಯಿತು.
ಕುತೂಹಲದ ವಿಷಯವೇನೆಂದರೆ ಗ್ರಾಮದಲ್ಲಿ ಹಿಂದೂ ಸಮುದಾಯದವರೇ ಬಹುಸಂಖ್ಯಾತರಾಗಿದ್ದು ಮುಸ್ಲಿಮರ ಜೊತೆ ಶಾಂತಿ ಹಾಗೂ ಸೌಹಾರ್ದತೆಯಿಂದ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಆದರೆ ಇದೀಗ ಈ ಪ್ರಕರಣದ ಬಳಿಕ ಸಂಪೂರ್ಣ ಗ್ರಾಮಸ್ಥರ ನೆಮ್ಮದಿಯೇ ಹಾಳಾಗಿದೆ ಅನ್ನುವುದು ರಾಜ್ಗೋಪಾಲ್ ಅವರ ಮಾತಾಗಿದೆ.
ತಮ್ಮ ಮಗಳ ವಿವಾಹಕ್ಕಾಗಿ ಜಮೀನು ಮಾರಲು ಬಯಸಿದ್ದೆ ಆದರೆ ಹಣದ ಅಭಾವದಿಂದಾಗಿ ಈಗ ವಿವಾಹ ನಿಂತುಹೋಗಿದೆ ಎಂಬುದನ್ನು ದುಃಖದಿಂದ ರಾಜ್ಗೋಪಾಲ್ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಇದರ ಮಧ್ಯೆ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ತಮಿಳುನಾಡು ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹಮಾನ್, ತಮಿಳುನಾಡಿನಲ್ಲಿ ವಕ್ಫ್ ಬೋರ್ಡ್ ಸುಪರ್ದಿಯಲ್ಲಿ ಹಲವಾರು ಆಸ್ತಿಗಳಿವೆ. ಅದರಲ್ಲಿ ಈ ಗ್ರಾಮವೂ ಒಂದು. ಈ ಭೂಮಿಯ ಹಕ್ಕನ್ನು ಈವರೆಗೂ ಅವರು ಅನುಭವಿಸಿಕೊಂಡು ಬಂದಿದ್ದಾರೆ. ಆದರೆ ವಾಸ್ತವವಾಗಿ ವಕ್ಫ್ ಬೋರ್ಡ್ ಹೆಸರಿನಲ್ಲಿಯೇ ಇದ್ದು, ಇವುಗಳ ವಿವರವನ್ನು ಸಬ್ ರಿಜಿಸ್ಟ್ರಾರ್ ಕಛೇರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.