ಬೆಂಗಳೂರು: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ವಿದ್ಯುತ್ ಸಮಸ್ಯೆಯಿಂದ ಮೂವರು ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಘಟನೆಯ ಬಗ್ಗೆ ಸೂಕ್ತ ಇಲಾಖಾ ತನಿಖೆ ನಡೆಸಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಲೋಪದೋಷಗಳ ಬಗ್ಗೆ ವರದಿ ನೀಡಲು ಬಿ ಎಂ ಸಿ ಆರ್ ಐ ಸಂಸ್ಥೆಯ ಡಾ.ಸ್ಮಿತಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಮಿತಿಯ ತನಿಖಾ ವರದಿ ಕೈ ಸೇರಿದ ಕೂಡಲೇ ಕರ್ತವ್ಯ ಲೋಪ ಎಸಗಿ ಅಮಾಯಕ ರೋಗಿಗಳ ದುರಂತ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.