ಬೆಂಗಳೂರು: ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಸ್ವರ್ಣಲತಾ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಲಯನ್ಸ್ ವಿಶ್ವವಿದ್ಯಾಲಯಕ್ಕೆ ಮಾರಕಾಸ್ತ್ರಗಳಿಂದ ನುಗ್ಗಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವರ್ಣಲತಾ ವಿರುದ್ಧ ಪ್ರಕರಣ ದಾಖಲಾಗಿದೆ. ಸೆ.10ರಂದು ಸ್ವರ್ಣಲತಾ ಬೌನ್ಸರ್ ಮಧುಕರ್ ಅಂಗೂರ್ ಸೇರಿದಂತೆ ಕೆಲವರ ಜೊತೆ ಅಲಯನ್ಸ್ ವಿಶ್ವ ವಿದ್ಯಾಲಯಕ್ಕೆ ನುಗ್ಗಿದ್ದರು. ಕಾಲೇಜಿನ ಒಡೆತನದ ವಿಚಾರವಾಗಿ ಗಲಾಟೆ ನಡೆದಿತ್ತು. ಕೋರ್ಟ್ ಆದೇಶವಿದೆ, ಕಾಲೇಜು ನಮ್ಮದು ಎಂದು ಅಕ್ರಮವಾಗಿ ಕಾಲೇಜಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಅಕ್ರಮವಾಗಿ ಕಾಲೇಜಿಗೆ ನುಗ್ಗಿದ ಕಾರಣಕ್ಕೆ ಸ್ವರ್ಣಲತಾ, ಮಧುಕರ್ ಸೇರಿದಂತೆ 7 ಜನರ ವಿರುದ್ಧ ಅಲೈನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ಪ್ರಕರಣ ದಾಖಲಿಸಿದ್ದರು. ಇದೀಗ ಸ್ವರ್ಣಲತಾ ಸೇರಿ 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಸ್ವರ್ಣಲತಾ ಬಂಧನಕ್ಕಾಗಿ ಪೊಲಿಸರು ಹುಡುಕಾಟ ನಡೆಸಿದ್ದಾರೆ.