ಬೆಂಗಳೂರು: ಹಿಂದಿ ದಿವಸ್ ಆಚರಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವಿಚಾರವಾಗಿ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ವಿರುದ್ಧ ಸರಣಿ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕನ್ನಡ ಅಕ್ಷರ ಕಲಿಸುವ ಶಾಲೆಗಳನ್ನು ಮುಚ್ಚಿಸಿದರು. ಅಧಿಕಾರ ಇಲ್ಲದಿದ್ದಾಗ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ ಎಂದು ಟ್ವಿಟ್ಟರಿನಲ್ಲಿ ಕುಟ್ಟುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ಸಾಧನೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಹಿಂದಿ ದಿನಾಚರಣೆಗೆ ವಿರೋಧ. ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರಿಂದ ಹಿಂದಿ ದಿನಾಚರಣೆ ಪರವಾದ ವಾದ. ಏಕೆ ಈ ನಾಟಕ? ಎಂದು ಪ್ರಶ್ನಿಸಿರುವ ಬಿಜೆಪಿ, ಮೋದಿ ಸರ್ಕಾರ ಕನ್ನಡದಲ್ಲೂ ರೈಲ್ವೇ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ. ಕನ್ನಡದಲ್ಲೂ ರೈಲ್ವೇ ಟಿಕೆಟ್ ಮುದ್ರಿಸಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಎಂದು ಕೇಳಿದೆ.
ನೆಹರೂ ಸರ್ಕಾರ ರಾಷ್ಟ್ರೀಯ ಹಿಂದಿ ದಿನಾಚರಣೆ ಜಾರಿಗೊಳಿಸಿದರೆ, ಮನಮೋಹನ್ ಸಿಂಗ್ ಸರ್ಕಾರ ವಿಶ್ವ ಹಿಂದಿ ದಿನಾಚರಣೆ ಜಾರಿಗೆ ತಂದಿತು. ಆದರೂ ಸಿದ್ದರಾಮಯ್ಯ ಅವರ ಅಸಹನೆ ಬಿಜೆಪಿ ವಿರುದ್ಧ ಮಾತ್ರವೇಕೆ? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.