ನವದೆಹಲಿ: ವಿಶ್ವಾದ್ಯಂತ ಹಿಜಾಬ್ ಗೆ ಮಾನ್ಯತೆ ಇರುವಾಗ ಕರ್ನಾಟಕದಲ್ಲಿ ಮಾತ್ರ ಯಾಕೆ ನೀಡುತ್ತಿಲ್ಲ ? ಶಾಲೆಗಳಿಗೆ ಸಮವಸ್ತ್ರ ನಿರ್ಧರಿಸುವ ಅಧಿಕಾರ ನೀಡಿರುವಾಗ ಹಿಜಾಬ್ ಒಂದು ಆಯ್ಕೆ ನಿಟ್ಟಿನಲ್ಲಿ ಅವಕಾಶ ನೀಡಿದರೆ ವ್ಯವಸ್ಥೆ ಹೇಗೆ ಹಾಳಾಗುತ್ತದೆ ಎಂದು ಹಿಜಾಬ್ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.
ರಾಜ್ಯದ ಶಾಲಾ-ಕಾಲೇಜಿನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಕುರಿತ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಇಂದು ನಡೆದ ವಿಚಾರಣೆ ವೇಳೆ ಹಿಜಾಬ್ ಪರ ವಕೀಲರು ವಾದ ಮಂಡಿಸುತ್ತಾ ಕೆಲ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಹಿರಿಯ ವಕೀಲ ಆದಿತ್ಯ ಸೋಂಧಿ, ಹಿಜಾಬ್ ವಿವಾದ ಗಂಭೀರವಾಗಿದೆ. ಸಾಮಾಜಿಕ, ಆರ್ಥಿಕ ಮಾನದಂಡಗಳ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ನಿಟ್ಟಿನಲ್ಲಿ ಇದನ್ನು ಪರಿಗಣಿಸಬೇಕು. ಹಿಜಾಬ್ ಒಂದು ಆಯ್ಕೆ ನಾನು ಶಾಲೆಗಳಲ್ಲಿ ಓದುತ್ತಿದ್ದಾಗ ಹಿಜಾಬ್ ಧರಿಸದ ಮುಸ್ಲೀಂ ಸಹಪಾಠಿಗಳು ಬರುತ್ತಿದ್ದರು, ಹಿಜಾಬ್ ಧರಿಸಿಯೂ ಕೆಲವರು ಬರುತ್ತಿದ್ದರು. ಹಾಗಾಗಿ ಇದೊಂದು ಆಯ್ಕೆ ಎಂಬಂತೆ ಅನುಮತಿ ನೀಡಬೇಕು ಎಂದು ವಾದ ಮಂಡಿಸಿದ್ದಾರೆ.
ಅಲ್ಲದೇ ಕೊಡವರಿಗೆ ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕಿದೆ ಎಂದು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಧಾರ್ಮಿಕ ಹೋರಾಟ, ಸಾಂಸ್ಕೃತಿಕ ಹಕ್ಕಿನ ನಡುವೆ ಒಂದು ಸಣ್ಣ ಗೆರೆ ಮಾತ್ರ ಇದ್ದು ಅದನ್ನು ಪ್ರತ್ಯೇಕಿಸುವುದು ಕಷ್ಟ. ಶಾಲೆಗಳಿಗೆ ಸಮವಸ್ತ್ರ ನಿರ್ಧಾರ ಮಾಡುವ ಅಧಿಕಾರ ಕೊಡಲಾಗಿದೆ ಆದರೆ ಹಿಜಬ್ ನಿಷೇಧಿಸಿ ಸರ್ಕಾರ ಆದೇಶ ನೀಡಿದೆ. ಸಾರ್ವಜನಿಕ ಸುವ್ಯವಸ್ಥೆಗಾಗಿ ಈ ಕ್ರಮ ಎನ್ನಲಾಗಿದೆ ಆದರೆ ಹಿಜಾಬ್ ನಿಂದ ಯಾವ ಸುವ್ಯವಸ್ಥೆ ಹಾಳಾಗುತ್ತದೆ. ವಿದ್ಯಾರ್ಥಿನಿಯರಿಗೆ ಹಿಜಾಬ್ ನ್ನು ಆಯ್ಕೆಯಾಗಿ ಧರಿಸಲು ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ.