ಬೆಂಗಳೂರು: ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮಕ್ಕೆ ಮತ್ತೊಂದು ವರ್ಷ ಅವಧಿ ವಿಸ್ತರಿಸಲು ಸರ್ಕಾರ ಮುಂದಾಗಿದ್ದು, ಕಾಯ್ದೆಗೆ ತಿದ್ದುಪಡಿ ತಂದಿದೆ.
ಸರ್ಕಾರಿ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರು ಸಕ್ರಮಕ್ಕಾಗಿ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಲು ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ಮಸೂದೆ -2022 ಅನ್ನು ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪರವಾಗಿ ಸಚಿವ ಗೋವಿಂದ ಕಾರಜೋಳ ಮಂಡಿಸಿದ್ದಾರೆ/
ಮೇ 26 ರಂದು ಈ ಕುರಿತಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಈಗ ಮಸೂದೆ ಮಂಡಿಸಲಾಗಿದೆ. 2005 ರ ಜನವರಿ 1 ಕ್ಕಿಂತ ಹಿಂದಿನಿಂದ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವವರು ಸಕ್ರಮಕ್ಕೆ ಅರ್ಜಿ ಸಲ್ಲಿಸಲು 2018ರ ಮಾರ್ಚ್ 17 ರಿಂದ 2019ರ ಮಾರ್ಚ್ 16ರ ವರೆಗೆ ಅವಕಾಶ ನೀಡಲಾಗಿತ್ತು. ಲೋಕಸಭೆ ಚುನಾವಣೆ ಘೋಷಣೆಯಾಗಿದ್ದ ಕಾರಣ ಅರ್ಜಿ ಸ್ವೀಕರಿಸಿರಲಿಲ್ಲ. ಹೀಗಾಗಿ ಅವಧಿಯನ್ನು ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು.
ಹೀಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ಮಾಡಿ ನಮೂನೆ 57 ರಲ್ಲಿ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.