ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳಿಗೆ ವೇತನ ಅನುದಾನ ನೀಡುವಂತೆ ಆಗ್ರಹಿಸಿ ಸೆ. 14 ಮತ್ತು 15 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಂಪು ಬಟ್ಟೆ ಧರಿಸಿಕೊಂಡು ಶಿಕ್ಷಕರ ದಿನಾಚರಣೆ ಆಚರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಉಪಾಧ್ಯಕ್ಷ ಯೋಗೀಶ್ ನಾಯಕ್ ತಿಳಿಸಿದರು.
ಅವರು ಇಂದು ಶಿವಮೊಗ್ಗದ ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1995 ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳಿಗೆ ಸರ್ಕಾರ ಇದುವರೆಗೂ ವೇತನ ಅನುದಾನ ನೀಡಿಲ್ಲ. ಕಳೆದ 27 ವರ್ಷಗಳಿಂದ ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಹೋರಾಟಗಳನ್ನು ಮಾಡುತ್ತಿದ್ದರೂ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ ಎಂದರು.
2006 ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ 1986 ರಿಂದ 1993 ರ ವರೆಗೆ ಅನುದಾನ ನೀಡಿತ್ತು. ನಂತರ 2008 ರಲ್ಲಿ ಬಿಜೆಪಿ ಸರ್ಕಾರ 1995 ರ ತನಕ ಅನುದಾನ ನೀಡಿತ್ತು. ಆ ನಂತರ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ. 2010 ರಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ 1995 ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳಿಗೆ ವೇತನ ಅನುದಾನಕ್ಕೆ ಒಳಪಡಿಸುವ ಬಗ್ಗೆ ಸರ್ಕಾರಗಳು ಭರವಸೆ ನೀಡುತ್ತಾ ಬಂದಿದ್ದು, ಕಡಿಮೆ ವೇತನ ಪಡೆದು ಶಿಕ್ಷಣ ನೀಡುತ್ತಿರುವ ನಮಗೆ ಜೀವನ ನಡೆಸುವುದೇ ದುಸ್ತರವಾಗಿದೆ. ಹಾಗೂ ಹಲವಾರು ಶಿಕ್ಷಕರು ನಿವೃತ್ತಿ ಅಂಚಿನಲ್ಲಿದ್ದರೂ ಸರ್ಕಾರ ಬೇಡಿಕೆ ಈಡೇರಿಸದಿರುವುದರಿಂದ ಶಿಕ್ಷಕರ ಬದುಕು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಕನ್ನಡ ಭಾಷೆ ಅಪಾಯದಲ್ಲಿದೆ. ಹಾಗೂ ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳು ಮತ್ತು ಶಿಕ್ಷಕರ ಬದುಕು ಅಳಿವಿನಂಚಿನಲ್ಲಿದೆ. 27 ವರ್ಷದ ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಸೆ. 14 ಮತ್ತು 15 ರಂದು ಕೆಂಪು ಬಟ್ಟೆ ಧರಿಸಿಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಅಂದು ನಿರ್ಧರಿಸಲಾಗುವುದು ಎಂದರು.