ಬೆಂಗಳೂರು: ವಿಧಾನಸಭೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರದ ವಿಚಾರ ಪ್ರತಿಧ್ವನಿಸಿದ್ದು, ರಾಜಕಾಲುವೆ ಒತ್ತುವರಿಯಿಂದಾಗಿಯೇ ಸಮಸ್ಯೆಯಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಕೃಷ್ಣಬೈರೇಗೌಡ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಹೆಚ್ಚು ಮಳೆಯಾಗಿರುವುದರಿಂದ ರಾಜಕಾಲುವೆ ಮಹತ್ವ ಪಡೆದುಕೊಂಡಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದರಿಂದಲೇ ಬೆಂಗಳೂರಿನಲ್ಲಿ ಸಮಸ್ಯೆಯಾಗಿದೆ. ರಾಜಕಾಲುವೆ ಕಾಮಗಾರಿಗಾಗಿಯೇ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ರಾಜಕಾಲುವೆ ನಿರ್ಮಾಣ ಸಮರ್ಪಕವಾಗಿ ಆಗಬೇಕೆಂದರೆ ಒತ್ತುವರಿ ತೆರವು ಕಾರ್ಯ ಆಗಬೇಕು. ರಾಜಕಾಲುವೆ ನಿರ್ಮಾಣಕ್ಕೆ ಸಮಯ ಬೇಕು. ಅಗತ್ಯವಿರುವ ಕಡೆ ಕೆಲಸ ನಡೆಯುತ್ತಿದೆ. ರಾಜಕಾಲುವೆ ನಿರ್ಮಾಣಕ್ಕಾಗಿಯೇ ಬಜೆಟ್ ನಲ್ಲಿ 1500 ಕೋಟಿ ಹಾಗೂ ಈಗ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.