ಮಹಾರಾಷ್ಟ್ರದ ಅಮರಾವತಿಯ ಸಂಸದೆ ನವನೀತ್ ರಾಣಾ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದ್ದಾರೆ. ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಗಣೇಶ ವಿಸರ್ಜನೆ ಮಾಡುತ್ತಿರುವ ವಿಡಿಯೊ ವೆೈರಲ್ ಆಗಿದೆ. ಕೆಲವರ ಜತೆಗೂಡಿ ಗಣೇಶನ ಮೂರ್ತಿಯನ್ನು ಭಕ್ತಿ, ಗೌರವದಿಂದ ಮುಳುಗಿಸುವ ಬದಲು ಮೇಲಿಂದ ನೀರಿಗೆ ಎಸೆಯುವುದು ವಿಡಿಯೋದಲ್ಲಿ ಕಾಣಿಸಿದೆ. ನೀರು ಕೂಡ ಕೊಳಕಾಗಿತ್ತು.
ವಿಡಿಯೋ ವೆೈರಲ್ ಆದ ನಂತರ ನವನೀತ್ ರಾಣಾ ಸಾಕಷ್ಟು ಟ್ರೋಲ್ ಆಗುತ್ತಿದ್ದು, ಹಲವು ಬಳಕೆದಾರರು ಈ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇಂತಹ ಟೀಕೆಗಳು ಹಿಂದುತ್ವ ಗುತ್ತಿಗೆದಾರರದ್ದು ಎಂದು ಆರೋಪಿಸಿದ್ದಾರೆ. ಒಬ್ಬರಂತೂ ಇದು ನಿಮ್ಮ ಹಿಂದೂ ಧರ್ಮವೇ ಎಂದು ಬರೆದಿದ್ದಾರೆ. ಇದೇ ವೇಳೆ ಹಿಂದೂ ದೇವತೆಗಳು ಹಾಗೂ ಧರ್ಮವನ್ನು ಅವಹೇಳನ ಮಾಡಿದ ಪ್ರಕರಣ ದಾಖಲಿಸುವಂತೆ ಹಲವರು ಒತ್ತಾಯಿಸಿದ್ದಾರೆ.
ಶಿವಸೇನೆ ಕೂಡ ನವನೀತ್ ರಾಣಾ ಅವರನ್ನು ಗುರಿಯಾಗಿಸಿದೆ. ಶಿವಸೇನೆಯ ನಾಯಕಿ ಸುಷ್ಮಾ ಅಂಧಾರೆ ಕೂಡ ಸಂಸದೆ ನವನೀತ್ ರಾಣಾ ಗುರಿಯಾಗಿಸಿ ವಾಗ್ದಾಳಿ ಮಾಡಿದ್ದಾರೆ. ಧರ್ಮದ ಹೆಸರಿನಲ್ಲಿ ನವನೀತ್ ರಾಣಾ ಆರಂಭಿಸಿರುವ ಹಿಂಸಾಚಾರ ನಿಲ್ಲಬೇಕು ಎಂದಿದ್ದಾರೆ.