ಬೇಹುಗಾರಿಕೆಯ ಸುಳ್ಳು ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿ ಅಲ್ಲಿನ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ 2013ರಲ್ಲಿ ಮೃತಪಟ್ಟಿದ್ದು, ಸೋಮವಾರದಂದು ನಡೆದ ರಸ್ತೆ ಅಪಘಾತದಲ್ಲಿ ಸರಬ್ಜಿತ್ ಸಿಂಗ್ ಪತ್ನಿ ಸುಖಪ್ರೀತ್ ಕೌರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸುಖಪ್ರೀತ್ ಕೌರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಪಂಜಾಬಿನ ಫತೇಪುರ್ ಬಳಿ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದ ಜೈಲಿನಲ್ಲಿದ್ದ ತನ್ನ ಸಹೋದರನ ಬಿಡುಗಡೆಗಾಗಿ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ನಿರಂತರ ಪ್ರಯತ್ನ ನಡೆಸಿದ್ದರಾದರೂ ಪ್ರಯೋಜನವಾಗಿರಲಿಲ್ಲ. ಈ ಕುರಿತಂತೆ ಬಾಲಿವುಡ್ ನಲ್ಲಿ ಚಲನಚಿತ್ರವೂ ನಿರ್ಮಾಣವಾಗಿತ್ತು. ದಲ್ಬೀರ್ ಕೌರ್ ಕಳೆದ ವರ್ಷದ ಜೂನ್ ನಲ್ಲಿ ಸಾವನ್ನಪ್ಪಿದ್ದು, ಇದೀಗ ಸರಬ್ಜಿತ್ ಸಿಂಗ್ ಪತ್ನಿ ಸುಖಪ್ರೀತ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.